ನಮ್ಮ ಫ್ಲಿಕ್ಸ್ ನಲ್ಲಿ ‘ತನಿಖೆ’

‘ತನಿಖೆ’ ಎನ್ನುವುದು ಹೊಸ ಕನ್ನಡ ಚಿತ್ರದ ಹೆಸರು. ಯುವ ಸ್ನೇಹಿತರ ತಂಡ ಸೇರಿ ಮಾಡಿರುವ ಚಿತ್ರ. ಹಳ್ಳಿಯ ಪರಿಸರದಲ್ಲಿ ನಡೆಯುವ ವಿಭಿನ್ನ ಪ್ರಯತ್ನದ ಕತೆ. ಗ್ರಾಮೀಣ‌ ಪ್ರದೇಶದಲ್ಲಿ ನಡೆಯುವ ನೈಜ ಘಟನೆಗಳನ್ನು ಆಧಾರವಾಗಿಸಿ‌ ಮಾಡಿರುವ ಚಿತ್ರ ಇದು. ಆ ಘಟನೆಗಳು ಏನು, ಯಾವ ರೀತಿ ನಡೆಯುತ್ತದೆ ಎನ್ನುವುದೇ ಚಿತ್ರದ ಪ್ರಮುಖ ಅಂಶ. ಸಿನಿಮಾ ಇದೇ ನವೆಂಬರ್ ತಿಂಗಳ 21ರಂದು ಒಟಿಟಿಯಲ್ಲಿ ಬಿಡುಗಡೆ ಕಾಣಲಿದೆ.

ಚಿತ್ರದ ಮಾಧ್ಯಮಗೋಷ್ಢಿಯಲ್ಲಿ ಮಾತನಾಡಿದ ನಿರ್ದೇಶಕ ಜಿ ಎಸ್ ಕರಿಗೌಡರು “ತನಿಖೆಯಲ್ಲಿ ಐದು ಜನ ಗ್ರಾಮೀಣ ಪ್ರದೇಶದ ಸೋಮಾರಿ ಹುಡುಗರ ಪ್ರೇಮ ಕತೆ, ಬಳಿಕ ಅವರು ಮಾಡುವ ತಪ್ಪು, ಅದಕ್ಕೆ ಹೆದರಿ ಊರು ಬಿಡುವವರು ಬೆಂಗಳೂರಿನ ಕ್ರ್ಯಾಕ್ ಪೊಲೀಸ್ ಒಬ್ಬನ ಕಾಟಕ್ಕೆ ಸಿಗುತ್ತಾರೆ ಮುಂದೇನಾಗುತ್ತದೆ ಎನ್ನುವುದೇ ಕತೆ” ಎಂದು ಹೇಳುವ ಮೂಲಕ ಚಿತ್ರದ ಬಗ್ಗೆ ಕುತೂಹಲ ಮೂಡಿಸಿದ್ದಾರೆ.

ಚಿತ್ರವನ್ನು ಕಳೆದ ಮಾರ್ಚ್ ನಲ್ಲಿಯೇ ಬಿಡುಗಡೆ ಮಾಡಬೇಕಿತ್ತು. ಕೊವಿಡ್ ಕಾರಣ ಮುಂದೆ ಹಾಕಲಾಯಿತು. ‘ನಮ್ಮ ಫ್ಲಿಕ್ಸ್ ‘ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ತಂಡ ತಿಳಿಸಿದೆ. ‘ನಮ್ಮ ಫ್ಲಿಕ್ಸ್’ನ ವಿಜಯ ಪ್ರಕಾಶ್ ಮಾತನಾಡಿ, ತಮ್ಮ ಒಟಿಟಿಯಿಂದ ಈ ಹಿಂದೆ ‘ಭ್ರಮೆ’ ಚಿತ್ರ ಬಿಡುಗಡೆಗೊಳಿಸಿದ್ದೆವು. ದೊಡ್ಡ ಬಜೆಟ್ ಅಲ್ಲದ ಚಿತ್ರಗಳು ಥಿಯೇಟರಲ್ಲಿ ಗೆಲ್ಲದೇ ಹೋದಾಗ ನಿರ್ಮಾಪಕರಿಗೆ ಮುಂದೆ ಸಂಪಾದನೆ ಇರುವುದಿಲ್ಲ. ಆದರೆ ನಮ್ಮಲ್ಲಿ ಹೆಚ್ಚಿನ ಅವಕಾಶ ದೊರೆಯುತ್ತವೆ ಎಂದರು.

ಚಿತ್ರದ ನಾಯಕಿ ಚಂದನಾ ಜಾನಕಿ ಮಾತನಾಡಿ “ನಾಯಕಿ ಎನ್ನುವುದಕ್ಕಿಂತ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರವನ್ನು ಮಾಡಿದ್ದೇನೆ. ಶಾಲಾ ಬಾಲಕಿಯ ಪಾತ್ರ. ಕ್ರಶ್ ಇರುವ ಹುಡುಗಿ ಎಂದು ತಿಳಿಸಿದರು. “ಎಣ್ಣೆ ಹೊಡೆಯೋದ.. ಹೆಂಡ್ತಿ ಬಿಡೋದ..” ಹಾಡು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹಿಟ್ ಆಗಿದೆ ಎಂದರು. ನವನಟ ಅಪ್ಪು ಬಡಿಗೇರ ತಮಗೆ ಇದೇ ಪ್ರಥಮ ಚಿತ್ರ ಎಂದರು. ಆದರೆ ಆನಂತರ ನಟಿಸಿರುವ ‘ರಾಜಾಧಿರಾಜ’, ‘ಡಿಸೆಂಬರ್ 24’ ಸಿನಿಮಾಗಳು ಕೂಡ ಬಿಡುಗಡೆಗೆ ಸಿದ್ಧವಾಗಿರುವ ಖುಷಿ ಹಂಚಿಕೊಂಡರು.
ಛಾಯಾಗ್ರಾಹಕ ಶ್ಯಾಮ್ ಸಿಂಧನೂರು, ನಟ ಮಚ್ಚು ಮುನಿರಾಜು ಮೊದಲಾದವರು ಉಪಸ್ಥಿತಿತರಿದ್ದರು.

Exit mobile version