Bhopal (Madhyapradesh): ಹಿಂದುಳಿದ ವರ್ಗಗಳ ಮೀಸಲಾತಿ ವ್ಯಾಪ್ತಿಗೆ ಎಲ್ಲ ಮುಸ್ಲಿಂ ಜಾತಿಗಳನ್ನು ಸೇರಿಸುವ ಮೂಲಕ ಒಬಿಸಿ ವರ್ಗಕ್ಕಿದ್ದ ದೊಡ್ಡ ಮೀಸಲಾತಿ ಪಾಲನ್ನು ಕರ್ನಾಟಕದಲ್ಲಿ ಕಸಿದುಕೊಳ್ಳಲಾಗಿದ್ದು, ಇದೇ ನೀತಿಯನ್ನು ದೇಶದಾದ್ಯಂತ ಜಾರಿಗೊಳಿಸಲು ಕಾಂಗ್ರೆಸ್ ಯೋಜಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಟೀಕಿಸಿದ್ದಾರೆ. ಹೀಗಾಗಿಯೇ ಕಾಂಗ್ರೆಸ್ ಪಕ್ಷ ಹಿಂದುಳಿದ ಸಮುದಾಯಗಳ ದೊಡ್ಡ ಶತ್ರುವಾಗಿದೆ ಎಂದು ಕಿಡಿಕಾರಿದ್ದಾರೆ.
ಮಧ್ಯಪ್ರದೇಶದ (Madhyapradesh) ಸಾಗರ ಜಿಲ್ಲೆಯಲ್ಲಿ ನಡೆದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘‘OBC ಮೀಸಲಾತಿ ವ್ಯಾಪ್ತಿಗೆ ಎಲ್ಲ ಮುಸ್ಲಿಂ ಜಾತಿಗಳನ್ನು ಸೇರಿಸುವ ಮೂಲಕ ಕರ್ನಾಟಕದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಕಾಂಗ್ರೆಸ್ (Congress) ಯೋಜಿಸಿದೆ. ಈ ಮೂಲಕ ನಿಮ್ಮ ಭವಿಷ್ಯದ ಪೀಳಿಗೆಯನ್ನು ಸಂಪೂರ್ಣವಾಗಿ ನಾಶಪಡಿಸಲು ಕಾಂಗ್ರೆಸ್ ಪಕ್ಷ ದೊಡ್ಡ ಹುನ್ನಾರ ನಡೆಸುತ್ತಿದೆ. ಧರ್ಮದ ಆಧಾರ ಮೇಲೆ ಮೀಸಲಾತಿ ನೀಡುವುದು ನಮ್ಮ ಸಂವಿಧಾನಕ್ಕೆ ವಿರುದ್ದವಾದದು.
ಧರ್ಮಾಧಾರಿತವಾಗಿ ನೀಡುವ ಮೀಸಲಾತಿಯನ್ನು ಬಾಬಾ ಸಾಹೇಬ್ ಅಂಬೇಡ್ಕರ್ (Baba Saheb Ambedkar) ಅವರು ಸ್ಪಷ್ಟವಾಗಿ ವಿರೋಧಿಸಿದ್ದರು. ಆದರೆ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವ ಮೂಲಕ ಕಾಂಗ್ರೆಸ್ ಅಪಾಯಕಾರಿ ನಿರ್ಣಯವನ್ನು ತೆಗೆದುಕೊಂಡಿದೆ. ಈ ಮೂಲಕ ಕಾನೂನುಬಾಹಿರ ತಂತ್ರಗಳನ್ನು ಮತ್ತು ಸಂವಿಧಾನ ವಿರೋಧಿ ಕೃತ್ಯಗಳ ಮೂಲಕ ಕರ್ನಾಟಕದಲ್ಲಿ ಮುಸ್ಲಿಮರಿಗೆ (Muslim) ಮೀಸಲಾತಿ ಒದಗಿಸಲಾಗಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಕಾಂಗ್ರೆಸ್ ಒಬಿಸಿ ಸಮುದಾಯಗಳ ಹಕ್ಕುಗಳನ್ನು ಕಸಿದುಕೊಳ್ಳುವ ಮೂಲಕ ಸಾಮಾಜಿಕ ನ್ಯಾಯವನ್ನು ಹತ್ಯೆ ಮಾಡಿದೆ. ಸಂವಿಧಾನದ ಆಶಯವನ್ನು ಕೊಲೆ ಮಾಡಿ, ಅಂಬೇಡ್ಕರ್ ಅವರನ್ನು ಅವಮಾನಿಸಿದೆ ಎಂದು ಟೀಕಿಸಿದ್ದಾರೆ. ಇನ್ನು ಮೊದಲ ಹಂತದ ಮತದಾನದ ನಂತರ ಲೋಕಸಭಾ ಚುನಾವಣೆಯ (Loksabha Election) ಕಾವು ತೀವ್ರಗೊಂಡಿದ್ದು, ವಿಪಕ್ಷಗಳನ್ನು ಗುರಿಯಾಗಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು, ಹೈದ್ರಾಬಾದ್ನಲ್ಲಿ ನಡೆದ ಸಮಾವೇಶದಲ್ಲಿ ಸಂಪತ್ತು ಹಂಚಿಕೆ ಹೇಳಿಕೆಯ ನೀಡಿದ ನಂತರ, ಬಿಜೆಪಿ (BJP) ನಾಯಕರು ಅದನ್ನೇ ಅಸ್ತ್ರವನ್ನಾಗಿಸಿಕೊಂಡಿದ್ದಾರೆ. ಒಂದು ವರ್ಗದ ಒಲೈಕೆಯಾಗಿ ಕಾಂಗ್ರೆಸ್ ಪಕ್ಷ ಈ ರೀತಿಯ ಕಾನೂನುಗಳ್ನು ರೂಪಿಸಲು ಯೋಜಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.