ನವೆಂಬರ್ ನಲ್ಲಿ ‘ಮುಖವಾಡ ಇಲ್ಲದವನು 84’

ಕನ್ನಡದಲ್ಲಿ ಶೀರ್ಷಿಕೆಗಳಿಂದಲೇ ಗಮನ ಸೆಳೆಯುವ ಕೆಲಸವನ್ನು ಒಂದಷ್ಟು ನಿರ್ದೇಶಕರು ಮಾಡುತ್ತಾರೆ. ಅವರಲ್ಲಿ ಉಪೇಂದ್ರ ಪ್ರಮುಖರು. ಇದೀಗ ಅಂಥದೊಂದು ಪ್ರಯತ್ನವನ್ನು ನವ ನಿರ್ದೇಶಕರೊಬ್ಬರು ಮಾಡಿದ್ದಾರೆ. ಹಾಗಂತ ಇಲ್ಲಿ ಉಪ್ಪಿ ಸಿನಿಮಾ ಮಾದರಿಯಂತೆ ಸಂಜ್ಞೆ- ಸೂಚನೆಗಳನ್ನು ಹೆಸರಾಗಿ ಬಳಸಿಲ್ಲ. ಬದಲಿಗೆ ಮುಖವಾಡ ಇಲ್ಲದವನು’ ಎನ್ನುವ ಕುತೂಹಲಕಾರಿ ಪದದ ಜೊತೆಗೆ84′ ಎನ್ನುವ ಸಂಖ್ಯೆಯನ್ನು ಕೂಡ ಸೇರಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ನಿರ್ದೇಶಕರು ತಮ್ಮ ಹೆಸರನ್ನು ಅಡಗಿಸಿಕೊಂಡಿದ್ದು ಮಾಧ್ಯಮಗೋಷ್ಠಿಯ ಸಂದರ್ಭದಲ್ಲಿ ಹೊರಗೆಡಹುವುದಾಗಿ ತಿಳಿದು ಬಂದಿದೆ.

ಹೆಸರಿಗೆ ತಕ್ಕಂತೆ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಈ ಚಿತ್ರದ ಶೂಟಿಂಗ್ ಮುಕ್ತಾಯವಾಗಿದ್ದು, ಸೆನ್ಸಾರ್ ಕೂಡ ಮುಗಿದಿದೆ. ನವೆಂಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ. ‘ಒಬ್ಬ ಮನುಷ್ಯ ತಾನು ಹುಟ್ಟಿದಾಗಿನಿಂದ ಸಾಯುವ ತನಕ ಯಾವಯಾವ ರೀತಿ ಮುಖವಾಡ ಹಾಕುತ್ತಾನೆ’ ಎನ್ನುವುದೇ ಚಿತ್ರದ ಕಥಾಹಂದರ.

ತೆರೆಗೆ ಬರಲು ಸಂಪೂರ್ಣ ಸಿದ್ದವಾಗಿರುವ ಈ ಚಿತ್ರದ ಹಾಡು ಹಾಗೂ ಟ್ರೇಲರ್ `ಸಿ ಮ್ಯೂಸಿಕ್’ ಮೂಲಕ ಬಿಡುಗಡೆಯಾಗಿದೆ. ಬೆಂಗಳೂರು, ಕೆಮ್ಮಣ್ಣುಗುಂಡಿ, ಬನ್ನೇರುಘಟ್ಟದ ಸುವರ್ಣಮುಖಿ, ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ನಲವತ್ತಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಓಂ ನಮಃ ಶಿವಾಯ ಮೂವೀಸ್ ಲಾಂಛನದಲ್ಲಿ ಗಣಪತಿ ಪಾಟೀಲ್ ಬೆಳಗಾವಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಶಿವಕುಮಾರ್ ಕಡೂರ್ ಬರೆದಿದ್ದಾರೆ. ಮಧು ಆರ್ಯ, ವಿನಯ್ ಗೌಡ, ಗಿರೀಶ್ ಛಾಯಾಗ್ರಹಣ, ದುರ್ಗ ಪ್ರಸಾದ್ ಸಂಗೀತ ನಿರ್ದೇಶನ ಹಾಗೂ ರುದ್ರೇಶ್ ಲಕ್ಯ ಅವರ ಸಂಕಲನ ಈ ಚಿತ್ರಕ್ಕಿದೆ. ಮಹಾರಾಜ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಶಿವಕುಮಾರ್ ಕಡೂರ್, ರಚನಾ ಅಂಬಲೆ, ಅನುಶ್ರೀ, ಕಾವ್ಯ ಗೌಡ, ಸಿ. ಎಸ್.ಪಾಟೀಲ್, ಹರೀಶ್ ಸಾರಾ, ಆನಂದ್ ಕೋರಾ, ಜಯಸೂರ್ಯ ಹಾಗೂ ಚಿತ್ರದ ನಿರ್ಮಾಪಕ ಗಣಪತಿ ಪಾಟೀಲ್ ಬೆಳಗಾವಿ ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.

Exit mobile version