ನಕ್ಸಲ್ ನಂಟು ಹಿನ್ನಲೆ, ರಾಜ್ಯದ ಹಲವೆಡೆ NIA ದಾಳಿ

ಬೆಂಗಳೂರು ಅ 13: ಶಿವಮೊಗ್ಗ ಸೇರಿದಂತೆ ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳ 20ಕ್ಕೂ ಹೆಚ್ಚು ಕಡೆ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಉಡುಪಿ ಜಿಲ್ಲೆಯ ಕಾರ್ಕಳ, ಶಿವಮೊಗ್ಗದ ಕೆಲವು ಕಡೆ ಎನ್‌ಐಎ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ. ಇತ್ತೀಚೆಗೆ ಸ್ಯಾಟಲೈಟ್ ಫೋನ್ ಕರೆ ಪತ್ತೆ ಮತ್ತು ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆ ಸಂಬಂಧ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೆ ದಾಳಿ :

ಎನ್‌ಐಎ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ದಾಳಿ ನಡೆಸಿದ್ದಾರೆ. ತಮಿಳುನಾಡಿನ ಕೊಯಮತ್ತೂರು, ಥೇಣಿ, ರಾಮನಾಥಪುರಂ, ಸೇಲಂ, ಕನ್ಯಾಕುಮಾರಿ, ಕೃಷ್ಣಗಿರಿ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಕೇರಳದ ವಯನಾಡ್, ತ್ರಿಶೂರ್ ಮತ್ತು ಕಣ್ಣೂರು ಜಿಲ್ಲೆಗಳಲ್ಲೂ ಪರಿಶೀಲಿಸಿದ್ದಾರೆ.

ನಕ್ಸಲ್ (ಸಿಪಿಐ ಮಾವೋವಾದಿ) ಚಳವಳಿಗೆ ಶಕ್ತಿ ತುಂಬಲು 2016ರ ಸೆಪ್ಟೆಂಬರ್ ಕೊನೆಯಲ್ಲಿ ಕೇರಳ ರಾಜ್ಯದ ಮಲಪುರಂ ಜಿಲ್ಲೆಯ ಎಡಕ್ಕರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತರಬೇತಿ ಶಿಬಿರ ನಡೆಸಲು ಸ್ಥಳ ಗುರುತಿಸಲಾಗಿತ್ತು. ಶಿಬಿರದಲ್ಲಿ ಶಸ್ತ್ರಾಸ್ತ್ರ ಬಳಕೆಯ ತರಬೇತಿ ನೀಡಲು ಚಿಂತಿಸಲಾಗಿತ್ತು. ಈ ಬಗ್ಗೆ ಎಡಕ್ಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐವರನ್ನು ಬಂಧಿಸಲಾಗಿತ್ತು. ಬಳಿಕ ಎನ್‌ಐಎ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿದ್ದು ಪ್ರತ್ಯೇಕ ಎಫ್‌ಐಆರ್ ದಾಖಲು ಮಾಡಿದ್ದರು. ಪ್ರಕರಣದಲ್ಲಿ ಇನ್ನೂ 20 ಮಂದಿ ಇರುವುದು ಬೆಳಕಿಗೆ ಬಂದಿತ್ತು. ಕರ್ನಾಟಕ ನಕ್ಸಲ್ ಚಳವಳಿಯ ಮುಂಚೂಣಿ ನಾಯಕರಾದ ಬಿ.ಜೆ. ಕೃಷ್ಣಮೂರ್ತಿ, ವಿಕ್ರಂ ಗೌಡ ಹೆಸರುಗಳು ಈ ಪಟ್ಟಿಯಲ್ಲಿದ್ದವು. ಹಾಗಾಗಿ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಇದಲ್ಲದೆ, ಸ್ಯಾಟಲೈಟ್ ಫೋನ್ ಕರೆಗೂ ನಕ್ಸಲ್ ಚಳವಳಿಗೂ ಲಿಂಕ್ ಇದೆಯಾ ಅನ್ನೋದ್ರ ಬಗ್ಗೆ ತನಿಖೆ ನಡೆಸಿದ್ದಾರೆ

Exit mobile version