ಪುಣೆಯಲ್ಲಿ ನಾಳೆಯಿಂದ ನೈಟ್ ಕಫ್ಯೂ ಜಾರಿ

ಮುಂಬೈ, ಎ. 02: ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದ ಪುಣೆ ಜಿಲ್ಲೆಯಲ್ಲಿ ನಾಳೆಯಿಂದ ಕಠಿಣ ನಿಯಮಾವಳಿಗಳನ್ನು ಜಾರಿಗೊಳಿಸುವ ಬಗ್ಗೆ ಇಂದು ಮಾರ್ಗಸೂಚಿ ಬಿಡುಗಡೆಗೊಳಿಸಿದ್ದಾರೆ. ನೂತನ ಆದೇಶದಂತೆ ಪುಣೆ ಜಿಲ್ಲೆಯಲ್ಲಿ ನಾಳೆಯಿಂದ ರಾತ್ರಿ ಕರ್ಫ್ಯೂ ಜಾರಿಯಾಗಲಿದೆ.

ಪುಣೆ ಡಿವಿಷನಲ್ ಕಮಿಷನರ್ ಹೊರಡಿಸಿರುವ ಮಾರ್ಗಸೂಚಿಯ ಪ್ರಕಾರ, ಬಾರ್, ಹೊಟೇಲ್, ರೆಸ್ಟೋರೆಂಟ್​ಗಳು ಏಳು ದಿನಗಳ ಕಾಲ ಕಾರ್ಯನಿರ್ವಹಿಸುವಂತಿಲ್ಲ. ಹೊಟೇಲ್ ಹಾಗೂ ರೆಸ್ಟೋರೆಂಟ್​ಗಳಿಂದ ಹೋಮ್ ಡೆಲಿವರಿಗೆ ಮಾತ್ರ ಅವಕಾಶವಿದೆ. ಜೊತೆಗೆ, ಧಾರ್ಮಿಕ ಕ್ಷೇತ್ರಗಳು ಕೂಡ 7 ದಿನಗಳ ಕಾಲ ಸಂಪೂರ್ಣವಾಗಿ ಮುಚ್ಚಲಿವೆ. ಮದುವೆ ಹಾಗೂ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸರ್ಕಾರ ತಡೆಯೊಡ್ಡಿದೆ. ಸಾವು ಸಂಭವಿಸಿದಲ್ಲಿ ಕೇವಲ 20 ಮತ್ತು ವಿವಾಹ ಸಮಾರಂಭದಲ್ಲಿ ಕೇವಲ 50 ಜನರು ಸೇರಬಹುದು ಎಂದು ಸೂಚನೆ ನೀಡಲಾಗಿದೆ.

ನಾಳೆ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ, 12 ಗಂಟೆಗಳ ನೈಟ್ ಕರ್ಫ್ಯೂ ಜಾರಿಯಾಗಲಿದೆ. ಮುಂದಿನ ಶುಕ್ರವಾರ ಪರಿಸ್ಥಿತಿಯನ್ನು ಮತ್ತೆ ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಡಿವಿಷನಲ್ ಕಮಿಷನರ್ ಸೌರಭ್ ರಾವ್ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಗುರುವಾರ 43,183 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಕೊರೊನಾ ಸೋಂಕು ಆರಂಭವಾದ ಬಳಿಕ ಒಂದು ದಿನದ ಅವಧಿಯಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣವಾಗಿದೆ. ಇದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 28,56,163 ಆಗಿದೆ. ಗುರುವಾರ, ರಾಜ್ಯದಲ್ಲಿ ಒಟ್ಟು 249 ಸಾವು ಸಂಭವಿಸಿದ್ದು, ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 54,898 ಆಗಿದೆ.

Exit mobile version