ನಿವೃತ್ತ ಸೈನಿಕನಾಗಿ ರಾಘಣ್ಣ.!

ರಾಘವೇಂದ್ರ ರಾಜ್ ಕುಮಾರ್ ಅವರು ನಾಯಕರಾಗಿ ನಟಿಸುತ್ತಿರುವ `ರಾಜತಂತ್ರ’ ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಭಾನುವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಪಿವಿಆರ್ ಸ್ವಾಮಿ ನಿರ್ದೇಶನದ ಪ್ರಥಮ ಚಿತ್ರಕ್ಕೆ ಹಿರಿಯ ನಟ ದೊಡ್ಡಣ್ಣ ಕ್ಲ್ಯಾಪ್ ಮಾಡಿದರೆ ಜನಪ್ರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ಕ್ಯಾಮೆರಾ ಸ್ವಿಚ್ ಆನ್ ಮಾಡಿ ಶುಭ ಕೋರಿದರು.

ಚಿತ್ರದಲ್ಲಿ ನನ್ನ ಹೆಸರು ರಾಜಾರಾಮ್ ಎಂದಾಗಿರುತ್ತದೆ. ಆತ ರಾಮನ ವ್ಯಕ್ತಿತ್ವ ಹಾಗು ರಾಜನ ತಾಂತ್ರಿಕತೆ ಎರಡೂ ಗುಣಗಳು ಇರುವವನು. ಸೈನ್ಯದಿಂದ ನಿವೃತ್ತನಾಗಿ ಮರಳಿದ ಬಳಿಕ ನಡೆಯುವ ಕತೆಯಲ್ಲಿ ಅದುವರೆಗೆ ಮಾತೃಭೂಮಿ ಕಾದವನು ಬಳಿಕ ತಾಯಿಯನ್ನು ಹೇಗೆ ನೋಡಿಕೊಳ್ಳುತ್ತಾನೆ ಎನ್ನುವುದೇ ಚಿತ್ರದ ತಿರುಳು ಎಂದರು. ಉಳಿದಿದ್ದೆಲ್ಲ ಕಾದು ನೋಡಬೇಕಾದ ತಿರುವು ಎನ್ನುವುದು ಅವರ ಅಭಿಪ್ರಾಯ. ಹಿರಿಯ ನಟಿ ಭವ್ಯಾ ಚಿತ್ರದಲ್ಲಿ ಒಂದು ಪ್ರಧಾನ ಪಾತ್ರವನ್ನು ಮಾಡುತ್ತಿದ್ದು,ರಾಘವೇಂದ್ರ ರಾಜ್ ಕುಮಾರ್ ಅವರ ಜತೆಗೆ ಇದೇ ಮೊದಲ ನಟಿಸುತ್ತಿದ್ದೇನೆ ಎಂದರು.

ನನ್ನದುನಾಯಕನಿಗೆ ತಾಯಿಯ ಪಾತ್ರ. ಸ್ವಾಮಿಯವರ ಛಾಯಾಗ್ರಹಣದಲ್ಲಿ ಈ ಹಿಂದೆ ನಟಿಸಿದ್ದೇನೆ. ಇದೀಗ ಮೊದಲ ಬಾರಿ ಅವರ ನಿರ್ದೇಶನದಲ್ಲಿ ನಟಿಸುತ್ತಿದ್ದೇನೆ ಎಂದರು. ನಟ ದೊಡ್ಡಣ್ಣ ಮಾತನಾಡಿ “ವಿಶ್ವಂ ಡಿಜಿಟಲ್ ಮೀಡಿಯಾದಿಂದ ಇದು ಎರಡನೇ ಚಿತ್ರ. ಚಿತ್ರದಲ್ಲಿ ನನ್ನದು ಹೋಮ್ ಮಿನಿಸ್ಟರ್ ಪಾತ್ರ. ಭವ್ಯಾ ಜತೆಗೆ ಆಕೆಯ ಮೊದಲ ಸಿನಿಮಾದಲ್ಲಿ ನಟಿಸಿದ್ದೆ” ಎಂದು ನೆನಪಿಸಿಕೊಂಡರು.

ರಾಘವೇಂದ್ರ ರಾಜ್ ಕುಮಾರ್ ಅವರ `ಅಮ್ಮನ‌ ಮನೆ’ ಸಿನಿಮಾದ ಛಾಯಾಗ್ರಾಹಕ ಪಿವಿಆರ್ ಸ್ವಾಮಿ ಗೂಗಾರೆದೊಡ್ಡಿಯವರೇ ಈ ಸಿನಿಮಾ ನಿರ್ದೇಶಿಸಿದ್ದಾರೆ. ನಿರ್ದೇಶನದ ಜತಗೆ ಛಾಯಾಗ್ರಹಣದ ಜವಾಬ್ದಾರಿಯೂ ಅವರದೇ. ಸೋಮವಾರದಿಂದಲೇ ಫಸ್ಟ್ ಶೆಡ್ಯೂಲ್ ಚಿತ್ರೀಕರಣ ಶುರುವಾಗಲಿದ್ದು ತಿಂಗಳಾಂತ್ಯಕ್ಕೆ ಟೀಸರ್ ಕೂಡ ಬಿಡುಗಡೆಯಾಗಬಹುದು ಎನ್ನುವ ಭರವಸೆಯನ್ನು ರಾಘವೇಂದ್ರ ರಾಜ್ ನೀಡಿದರು.

ಚಿತ್ರಕ್ಕೆ ಕತೆ, ಸಂಭಾಷಣೆ ಬರೆದಿರುವ ಜೆಎಂ ಪ್ರಹ್ಲಾದ್ ಅವರು ಇದೊಂದು ಕಾಲ್ಪನಿಕ ಕತೆಯಾದರೂ ನೈಜವೆನಿಸುವ ಸನ್ನಿವೇಶಗಳನ್ನು ಹೊಂದಿರುತ್ತದೆ ಎಂದರು. ಯುವನಟ ರಂಜನ್ ಚಿತ್ರದಲ್ಲಿ ಒಂದು ಪೊಲೀಸ್ ಅಧಿಕಾರಿಯ ಪಾತ್ರದ ಮೂಲಕ ಕಾಣಿಸಿಕೊಳ್ಳಲಿದ್ದಾರೆ. ನಟರಾದ ವಿಜಯ ಭಾಸ್ಕರ್ , ದತ್ತಾತ್ರೇಯ ಮತ್ತು ಸಂಕಲನಕಾರ ನಾಗೇಶ್ ಮೊದಲಾದವರು ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Exit mobile version