Rome: ಇಸ್ಲಾಮಿಕ್ ಸಂಸ್ಕೃತಿಯು ಯುರೋಪಿಯನ್ (European) ನಾಗರಿಕತೆಗೆ ಸಂಪೂರ್ಣವಾಗಿ ಹೊಂದಿಕೆಯಾಗುವುದಿಲ್ಲ. ಇಸ್ಲಾಂನ ಮೌಲ್ಯಗಳು ಯುರೋಪಿಯನ್ ಸಂಸ್ಕೃತಿಗೆ ಹೊಂದಾಣಿಕೆಯಾಗುವುದಿಲ್ಲ. ಹೀಗಾಗಿ ಯುರೋಪ್ನಲ್ಲಿ ಇಸ್ಲಾಂಗೆ ಸ್ಥಾನವಿಲ್ಲ ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರೋಮ್ನಲ್ಲಿ ಆಡಳಿತರೂಢ ಬ್ರದರ್ಸ್ ಆಫ್ ಇಟಲಿ (Brothers of Italy) ಪಕ್ಷ ಆಯೋಜಿಸಿದ್ದ ರಾಜಕೀಯ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಜಾರ್ಜಿಯಾ ಮೆಲೋನಿ ಅವರು, ಇಸ್ಲಾಮಿಕ್ (Islamic) ಸಂಸ್ಕೃತಿಯು ಯುರೋಪಿಯನ್ ನಾಗರಿಕತೆಗೆ ಸಂಪೂರ್ಣವಾಗಿ ಹೊಂದಿಕೆಯಾಗುವುದಿಲ್ಲ, ಹೀಗಾಗಿ ಇಟಲಿಯಲ್ಲಿ ಷರಿಯಾ ಕಾನೂನನ್ನು ಜಾರಿಗೆ ತರಲು ನಾವು ಅನುಮತಿಸುವುದಿಲ್ಲ. ಇಸ್ಲಾಮಿಕ್ ಸಂಸ್ಕೃತಿ ಮತ್ತು ಯುರೋಪಿಯನ್ ನಾಗರಿಕತೆಯ ಮೌಲ್ಯಗಳು ಮತ್ತು ಹಕ್ಕುಗಳು ಹೊಂದಾಣಿಕೆಯ ಸಮಸ್ಯೆಯನ್ನು ಹೊಂದಿವೆ ಎಂದು ಇಟಾಲಿಯನ್ ಪ್ರಧಾನಿ ಹೇಳಿದ್ದಾರೆ.
ಇಸ್ಲಾಮಿಕ್ ಸಂಸ್ಕೃತಿ ಮತ್ತು ಮೌಲ್ಯಗಳು ನಮ್ಮ ಯರೋಪಿಯನ್ ನಾಗರಿಕತೆಯ ಹಕ್ಕುಗಳ ನಡುವೆ ಹೊಂದಾಣಿಕೆಯ ಸಮಸ್ಯೆ ಇದೆ ಎಂದು ನಾನು ನಂಬುತ್ತೇನೆ. ಇಟಲಿಯಲ್ಲಿ ಷರಿಯಾ ಕಾನೂನನ್ನು ಜಾರಿಗೆ ತರಲು ಅನುಮತಿಸುವುದಿಲ್ಲ. ನಮ್ಮ ನಾಗರಿಕತೆಯ ಮೌಲ್ಯಗಳು ವಿಭಿನ್ನವಾಗಿವೆ. ಇಟಲಿಯಲ್ಲಿನ ಹೆಚ್ಚಿನ ಇಸ್ಲಾಮಿಕ್ ಸಾಂಸ್ಕೃತಿಕ ಕೇಂದ್ರಗಳು ಸೌದಿ ಅರೇಬಿಯಾದಿಂದ (Soudi Arabia) ಹಣಕಾಸು ಪಡೆಯುತ್ತವೆ.
ಸೌದಿ ಅರೇಬಿಯಾವು ಶರಿಯಾ ಕಾನೂನನ್ನು ಪಾಲಿಸುತ್ತದೆ. ಷರಿಯಾ ಪ್ರಕಾರ ವ್ಯಭಿಚಾರಕ್ಕೆ, ಧರ್ಮಭ್ರಷ್ಟತೆ ಮತ್ತು ಸಲಿಂಗಕಾಮಕ್ಕೆ ಮರಣದಂಡನೆ ಅನ್ವಯಿಸುವ ಕಾನೂನಾಗಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲ. ಇದರರ್ಥ ಇಸ್ಲಾಂ ಧರ್ಮ (Islam Religion) ವನ್ನು ಸಾಮಾನ್ಯೀಕರಿಸುವುದು ಎಂದಲ್ಲ. ಇದರರ್ಥ ಯುರೋಪ್ನಲ್ಲಿ ಇಸ್ಲಾಮೀಕರಣದ ಪ್ರಕ್ರಿಯೆಯು ನಮ್ಮ ನಾಗರಿಕತೆಯ ಮೌಲ್ಯಗಳಿಂದ ಬಹಳ ದೂರದಲ್ಲಿದೆ ಎಂಬ ಸಮಸ್ಯೆಯನ್ನು ಎತ್ತುವುದು ಎಂದು ಅವರು ಹೇಳಿದರು.
ಇನ್ನು ರೋಮ್ನಲ್ಲಿ ಜಾರ್ಜಿಯಾ ಮೆಲೋನಿ ಅವರ ಬಲಪಂಥೀಯ ಪಕ್ಷ ಬ್ರದರ್ಸ್ ಆಫ್ ಇಟಲಿ ಆಯೋಜಿಸಿದ್ದ ರಾಜಕೀಯ ಸಮಾವೇಶದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ (Rishi Sunak) ಕೂಡ ಭಾಗವಹಿಸಿದ್ದರು. ಈ ಸಮಾವೇಶದಲ್ಲಿ ಜಾರ್ಜಿಯಾ ಮೆಲೋನಿ ಅವರು ನೀಡಿರುವ ಈ ಹೇಳಿಕೆಗಳು ಇದೀಗ ಎಲ್ಲೆಡೆ ವೈರಲ್ (Viral) ಆಗುತ್ತಿದ್ದು, ಕೆಲ ಮುಸ್ಲಿಂ ರಾಷ್ಟ್ರಗಳು ಜಾರ್ಜಿಯಾ ಮೆಲೋನಿ ಅವರ ಹೇಳಿಕೆಯನ್ನು ಖಂಡಿಸಿವೆ.