ರಾಜ್ಯದಲ್ಲಿ ಒಮಿಕ್ರಾನ್‌ ಪತ್ತೆಯಾಗಿಲ್ಲ – ಬೊಮ್ಮಾಯಿ

ಬೆಂಗಳೂರು ನ 29 : ಕೊರೋನಾದ ಹೊಸ ರೂಪಾಂತರ ಒಮಿಕ್ರಾನ್ ಹಲವು ದೇಶಗಳಲ್ಲಿ ಪತ್ತೆಯಾಗಿದ್ದು ಭಾರತಕ್ಕೂ ಇದರ ಭೀತಿ ಉಂಟಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಮತ್ತೆ ಸಾಂಕ್ರಾಮಿಕ ರೋಗ ಉಲ್ಬಣಗೊಳ್ಳದಂತೆ ತಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ.

ಒಮಿಕ್ರಾನ್ ಪತ್ತೆಯಾಗಿರುವ ದೇಶಗಳಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರನ್ನು ನಿರ್ಬಂಧಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ನೀಡಿದ್ದಾರೆ.

‘ದಕ್ಷಿಣ ಆಫ್ರಿಕಾ, ಬೋಟ್ಸ್‌ವಾನಾ, ಜಿಂಬಾಂಬ್ವೆ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಒಮಿಕೊರಾನ್ ಕಾಣಿಸಿಕೊಂಡಿದೆ. ಇಂತಹ ದೇಶಗಳಿಂದ ಬರುವ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ನಡೆಸಲಾಗುವುದು. ನೆಗೆಟಿವ್ ವರದಿ ಬಂದಿದೆ ಮಾತ್ರ ಅವರನ್ನು ನಗರಕ್ಕೆ ಪ್ರವೇಶಿಸಲು ಅನುಮತಿಸಲಾಗುವುದು. ಪಾಸಿಟಿವ್ ಬಂದರೆ ಅವರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುವುದು” ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಇದುವರೆಗೆ ಕೊರೋನಾದ ಹೊಸ ರೂಪಾಂತರ ಒಮಿಕ್ರಾನ್ ಪತ್ತೆಯಾಗಿಲ್ಲ, ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ವಿದೇಶಗಳಿಂದ ಬರುವವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಮತ್ತು ಅವರ ಮೇಲೆ ತೀವ್ರ ನಿಗಾ ಇಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಕೇರಳದಿಂದ ರಾಜ್ಯಕ್ಕೆ ಬರುತ್ತಿರುವ ಅರೆವೈದ್ಯಕೀಯ ಸಿಬ್ಬಂದಿಯಲ್ಲಿ ಕೋವಿಡ್ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದೆ. ಈ ಕಾರಣದಿಂದಾಗಿ ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಗಡಿ ಭಾಗಗಳಲ್ಲಿ ಕಟ್ಟೆಚ್ಚರಕ್ಕೆ ಆದೇಶಿಸಲಾಗಿದೆ. 2 ಡೋಸ್ ಲಸಿಕೆ ಪಡೆದುಕೊಂಡವರು, ನೆಗೆಟಿವ್ ವರದಿ ಇರುವವರು ಮಾತ್ರ ರಾಜ್ಯಕ್ಕೆ ಪ್ರವೇಶಿಸಬಹುದು ಎಂದಿದ್ದಾರೆ.

ಧಾರವಾಡ, ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಅಂತಹ ಸ್ಥಳಗಳನ್ನು ನಿರ್ಬಂಧಿತ ವಲಯ ಎಂದು ಘೋಷಿಸಲಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ 91 ಲಕ್ಷ ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಶೇ.70ರಷ್ಟು ಜನರ ಸಂಪೂರ್ಣ ಲಸಿಕೆ ಪಡೆಯುವ ಗುರಿ ನಿಗದಿಪಡಿಸಲಾಗಿದೆ ಎಂದಿದ್ದಾರೆ.

Exit mobile version