೧೮ವರ್ಷ ಮೇಲ್ಪಟ್ಟವರು ತಮ್ಮಿಚ್ಛಿಯ ಯಾವುದೇ ಧರ್ಮವನ್ನು ಸೇರಬಹುದು: ಸುಪ್ರೀಮ್ ಕೋರ್ಟ್

ನವ ದೆಹಲಿ, ಏ. 10: 18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ತಮ್ಮ ಧರ್ಮ ಆಯ್ಕೆ ಮಾಡಲು ಮುಕ್ತರಾಗಿದ್ದಾರೆ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ. ಮಾಟ ಮತ್ತು ಧಾರ್ಮಿಕ ಮತಾಂತರವನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನಗಳನ್ನು ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಮನವಿಯನ್ನು ನಿರಾಕರಿಸಿರುವ ಸುಪ್ರೀಂ ಕೋರ್ಟ್​, “ಸಂವಿಧಾನದ ಆಶಯದಂತೆ 18 ವರ್ಷಕ್ಕೆ ಮೇಲ್ಪಟ್ಟ ವ್ಯಕ್ತಿ ಯಾವುದೇ ಧರ್ಮವನ್ನು ಅನುಸರಿಸುವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಹೊಂದಿದ್ದಾನೆ” ಎಂದು ಅಭಿಪ್ರಾಯಪಟ್ಟಿದೆ.

ವಕೀಲ ಅಶ್ವಿನಿ ಉಪಾಧ್ಯಾಯ ಅವರ ಪರವಾಗಿ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣ ಅವರು ಈ ಅರ್ಜಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್, ಬಿ ಆರ್ ಗವಾಯಿ ಮತ್ತು ಹೃಷಿಕೇಶ ರಾಯ್ ಅವರ ನ್ಯಾಯಪೀಠವು, “ಆರ್ಟಿಕಲ್ 32 ರ ಅಡಿಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಯು ತನಗೆ ಬೇಕಾದ ಧರ್ಮವನ್ನು ಆಯ್ಕೆ ಮಾಡಲು ಅವಕಾಶ ನೀಡದಂತೆ ಮಾಡಲು ಯಾವುದೇ ಕಾರಣವಿಲ್ಲ” ಎಂದು ಹೇಳಿದೆ.

ನಂತರ ಶಂಕರನಾರಾಯಣನ್ ಅವರು ಅರ್ಜಿಯನ್ನು ಹಿಂಪಡೆಯುವುದಾಗಿ ಹಾಗೂ ಸರ್ಕಾರ ಮತ್ತು ಕಾನೂನು ಆಯೋಗಕ್ಕೆ ಮನವಿ ನೀಡಲು ಅನುಮತಿ ಕೇಳಿದರು. ಆದರೆ ನ್ಯಾಯಾಲವು ಇದಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಜೊತೆಗೆ ಅರ್ಜಿಯನ್ನು ವಜಾಗೊಳಿಸಿದೆ.

Exit mobile version