ಚೀನಾ ಸಹಭಾಗಿತ್ವದಲ್ಲಿ ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಿದ ಪಾಕಿಸ್ತಾನ

ಇಸ್ಲಾಮಾಬಾದ್, ಜೂ. 02: ಕೊರೊನಾ ತಡೆಯಲು ಚೀನಾ ಸಹಯೋಗದಲ್ಲಿ ದೇಶಿ ಲಸಿಕೆ ‘ಪಾಕ್‌ವ್ಯಾಕ್’ ಅನ್ನು ಅಭಿವೃದ್ಧಿಪಡಿಸಿರುವುದಾಗಿ ಪಾಕಿಸ್ತಾನ ಮಂಗಳವಾರ ಹೇಳಿದೆ. ವಿಶೇಷ ಸಹಾಯಕ ಆರೋಗ್ಯಾಧಿಕಾರಿ ಡಾ. ಫೈಸಲ್ ಸುಲ್ತಾನ್ ಈ ಬಗ್ಗೆ ಮಾಹಿತಿ ನೀಡಿದ್ದು, ಸಂಕಷ್ಟದ ಸಮಯದಲ್ಲಿ ಸವಾಲುಗಳನ್ನು ಎದುರಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂದಿದ್ದಾರೆ.

ಚೀನಾ ನಮಗೆ ಲಸಿಕೆ ಉತ್ಪಾದನೆಗೆ ಸಹಕಾರ ನೀಡಿತು. ಕಚ್ಚಾ ಸಾಮಾಗ್ರಿಗಳನ್ನು ಚೀನಾ ಒದಗಿಸಿತಾದರೂ, ಲಸಿಕೆ ತಯಾರಿಕೆ ಅಷ್ಟೊಂದು ಸುಲಭವಾಗಿರಲಿಲ್ಲ. ಶೀಘ್ರದಲ್ಲೇ ಸ್ಥಳೀಯವಾಗಿ ಗರಿಷ್ಠ ಸಂಖ್ಯೆಯಲ್ಲಿ ಲಸಿಕೆ ಉತ್ಪಾದಿಸಿ, ಜನರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಾ. ಸುಲ್ತಾನ್ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಕಳೆದ ಮೂರು ತಿಂಗಳಿನಲ್ಲೇ ಮಂಗಳವಾರ ಕನಿಷ್ಠ ಸಂಖ್ಯೆಯ ಅಂದರೆ ಒಟ್ಟು 1,771 ಪಾಸಿಟಿವ್ ಪ್ರಕರಣ ವರದಿಯಾಗಿದೆ. ಇದರೊಂದಿಗೆ ಒಟ್ಟು 9,22,824 ದೃಢಪಟ್ಟ ಪ್ರಕರಣ ಇದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Exit mobile version