ಪೆಗಾಸಸ್ ಗೂಢಚರ್ಯೆ ಪ್ರಕರಣ: ಬಿಜೆಪಿ ವಿರುದ್ಧ ಕೈ ನಾಯಕರ ಕಿಡಿ: ಕಾನೂನು ಹೋರಾಟ ನಡೆಸಲು ತೀರ್ಮಾನ

ಬೆಂಗಳೂರು, ಜು. 21: ಪೆಗಾಸಸ್ ಗೂಢಚರ್ಯೆ ಪ್ರಕರಣದ ಬಗ್ಗೆ ಕಾಂಗ್ರೆಸ್ ನಾಯಕರು ಆಕ್ರೋಶ ಹೊರ ಹಾಕಿದ್ದು, ಈ ಸಂಬಂಧ ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ.

ಈ ಸಂಬಂಧ ದೆಹಲಿಯಲ್ಲಿ ಮಾತನಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜಕೀಯದಲ್ಲಿ ಆಪರೇಷನ್ ಕಮಲ ಎಂಬ ಪದ ಹುಟ್ಟಿದ್ದೇ ಯಡಿಯೂರಪ್ಪ ಅವಧಿಯಲ್ಲಿ, ಯಡಿಯೂರಪ್ಪ ಆಪರೇಷನ್ ಕಮಲದ ಜನಕ. ದೇಶಾದ್ಯಂತ ಆಪರೇಷನ್ ಕಮಲ‌ ಎಂಬ ಪದವೇ ಇರಲಿಲ್ಲ ಎಂದು ವಾಗ್ದಾಳಿ ನಡೆಸಿದ ಅವರು, ಪೆಗಾಸಸ್ ಗೂಢಚರ್ಯೆ ಪ್ರಕರಣದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

ಇನ್ನೂ ಇದೇ ವಿಚಾರದ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪೆಗಾಸಸ್‌ ಗೂಢಚರ್ಯೆ ಪ್ರಕರಣದ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯಬೇಕಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಆಗ್ರಹಿಸಿದ ಅವರು, ಇಂತಹ ಕುಕೃತ್ಯ ನಡೆಯಬಾರದು ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಪ್ರತಿ ಬಾರಿಯೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈಗಿರುವುದಕ್ಕಿಂತ ಕೀಳುಮಟ್ಟಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಅಂದುಕೊಂಡಾಗಲೆಲ್ಲ ಹೊಸ ಪುರಾವೆಗಳು ಈ ಸರ್ಕಾರವು ಕೆಳಮಟ್ಟಕ್ಕೆ ಇಳಿಯಲು ಸಾಧ್ಯ ಎಂದು ತೋರಿಸಿಕೊಡುತ್ತವೆ.

ಅಧಿಕಾರ ಗಳಿಸಲು, ಜಾತ್ಯತೀತ ಸರ್ಕಾರಗಳನ್ನು ಉರುಳಿಸಲು ವಿದೇಶೀ ಶಕ್ತಿಗಳೊಂದಿಗೆ ಕೈ ಜೋಡಿಸುವುದನ್ನೂ ಸೇರಿಸಿದಂತೆ ಬಿಜೆಪಿ ಏನನ್ನೂ ಮಾಡಬಲ್ಲದೆಂದು ಪೆಗಾಸಸ್ ಪ್ರಕರಣ ತೋರಿಸಿದೆ. ಇದೇ ವಿಧಾನವನ್ನು ಬಳಸಿ ಜನರು ತಿರಸ್ಕರಿಸಿದರೂ ಗೋವಾ, ಪುದುಚೇರಿ, ಮಣಿಪುರ, ಮಧ್ಯಪ್ರದೇಶಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಈ ಮೂಲಕ ಸಾಬೀತಾಗುತ್ತಿದೆ. ನಾಚಿಕೆಗೆಟ್ಟ ಕುದುರೆ ವ್ಯಾಪಾರ ಮತ್ತು ಅಧಿಕಾರ ದುರುಪಯೋಗದ ಮೂಲಕ ಭಾರತದಲ್ಲಿ ಪ್ರಜಾಪ್ರಭುತ್ವದ ಸಾವಿಗೆ ಬಿಜೆಪಿ ಕಾರಣವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

Exit mobile version