ಗ್ಯಾರಂಟಿಗೆ ಹಣ ಬೇಕು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡ ಕಾಂಗ್ರೆಸ್ ಸರ್ಕಾರ.

Bengaluru: ಕರ್ನಾಟಕ ರಾಜ್ಯ ಸರ್ಕಾರವು ಇಂಧನ ಬೆಲೆ ಏರಿಕೆಯ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. ನಮಗೆ ಗ್ಯಾರಂಟಿ ಯೋಜನೆ (Guarantee Scheme) ಗಳು ಮತ್ತು ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಹಣದ ಅಗತ್ಯವಿದೆ. ಆದ್ದರಿಂದ ಇಂಧನ ಬೆಲೆಯಲ್ಲಿ ಹೆಚ್ಚಳ ಮಾಡಿದ್ದೇವೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಎಂ.ಬಿ ಪಾಟೀಲ್ (M B Patil) ಹೇಳಿದ್ದಾರೆ. ಆದರೆ, ಇಂಧನ ದರ ಏರಿಕೆಯಾಗಿದ್ದರೂ ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇತರೆ ರಾಜ್ಯಗಳಿಗಿಂತ ಕಡಿಮೆ ಇದೆ ಎಂದು ಅವರು ಹೇಳಿದ್ದಾರೆ.

Politics

ಕರ್ನಾಟಕ (Karnataka) ಸರ್ಕಾರವು ಪೆಟ್ರೋಲ್ ಬೆಲೆಯನ್ನು ಲೀಟರ್ಗೆ 3 ರೂ ಮತ್ತು ಡೀಸೆಲ್ಗೆ 3.5 ರೂ ಹೆಚ್ಚಿಸಿದೆ. ಇಂಧನ ಬೆಲೆ ಏರಿಕೆ ನಿರ್ಧಾರಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು, ಇದರಿಂದ ಸಾರ್ವಜನಿಕ ಸಾರಿಗೆ ಮತ್ತು ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಲಿದೆ ಎಂದು ಹೇಳಿದೆ. ಮೋದಿ ಸರ್ಕಾರ ಬೆಲೆ ನಿಯಂತ್ರಣಕ್ಕೆ ಯತ್ನಿಸುತ್ತಿದೆ.

ಆದರೆ ಕರ್ನಾಟಕ ಸರ್ಕಾರ ಏಕಾಏಕಿ ಬೆಲೆ ಏರಿಕೆ ಮಾಡಿದ್ದು, ಇದರಿಂದ ನಿತ್ಯ ಜೀವನದಲ್ಲಿ ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿದೆ. ರಾಜ್ಯ ಸರ್ಕಾರ ಬೆಲೆಯೇರಿಕೆಯನ್ನು ಹಿಂಪಡೆಯಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಆಗ್ರಹಿಸಿದ್ದಾರೆ. ಕರ್ನಾಟಕದ ಮಾಜಿ ಸಿಎಂ ಹಾಗೂ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ (Jagadish Shettar) ಮಾತನಾಡಿ, ರಾಜ್ಯ ಸರ್ಕಾರದ ಬಳಿ ಸರ್ಕಾರಿ ನೌಕರರ ವೇತನ, ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ.

ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವ ಮೂಲಕ ಸಾಮಾನ್ಯ ಜನರಿಗೆ ಹೊರೆಯಾಗುವ ಕ್ರಮ ಕೈಗೊಂಡಿದ್ದಾರೆ, ಇದು ಅಸಮಂಜಸವಾಗಿದೆ. ಕಾಂಗ್ರೆಸ್ (Congress) ಪಕ್ಷದ ಐದು ಗ್ಯಾರಂಟಿಗಳು ಸರ್ಕಾರದ ಬೊಕ್ಕಸಕ್ಕೆ ಭಾರಿ ಒತ್ತಡ ತಂದಿವೆ. ಗ್ಯಾರಂಟಿ ಯೋಜನೆಗಳು ಮತ್ತು ಉಚಿತ ಯೋಜನೆಗಳಿಂದಾಗಿ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎಂದು ಟೀಕಿಸಿದ್ದಾರೆ.

ಇನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ (B Y Vijayendra) ಅವರು ಬೆಲೆಯೇರಿಕೆಯನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದು, ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂಬುದನ್ನು ಒಪ್ಪಿಕೊಳ್ಳಲು ಮುಖ್ಯಮಂತ್ರಿ ಸಿದ್ಧರಿಲ್ಲ, ಆದರೆ ಇಂಧನ ಬೆಲೆ ಏರಿಕೆಯೇ ಅದಕ್ಕೆ ಸಾಕ್ಷಿ. ಗ್ಯಾರಂಟಿಗಳ ಕಾರಣದಿಂದಾಗಿ ಸರ್ಕಾರಕ್ಕೆ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ (BJP)ಗೆ ಮತ ಹಾಕಿದ್ದಕ್ಕೆ ಈ ಜನವಿರೋಧಿ ಕಾಂಗ್ರೆಸ್ ಸರ್ಕಾರ ಕನ್ನಡಿಗರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

Exit mobile version