ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸಿಎಎ ಉಲ್ಲೇಖವೇ ಇಲ್ಲ: ಕಾಂಗ್ರೆಸ್ ವಿರುದ್ಧ ಪಿಣರಾಯಿ ಕಿಡಿ

Tiruvanthapura (Kerala): ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸಿದ್ದಾಂತವಿಲ್ಲ, ಮತದಾರರನ್ನು ಸೆಳೆಯಲು ಹೋರಾಟ ಮಾಡುವ ನಾಟಕವಾಡುತ್ತದೆ. ಈ ಹಿಂದೆ ಸಿಎಎ (CAA) ವಿರುದ್ದ ತೀವ್ರ ವಾಗ್ದಾಳಿ ನಡೆಸುತ್ತಿದ್ದ ಕಾಂಗ್ರೆಸ್, ಇದೀಗ ತನ್ನ ಪ್ರಣಾಳಿಕೆಯಲ್ಲಿ ಆ ಬಗ್ಗೆ ಯಾವುದೇ ಉಲ್ಲೇಖವನ್ನೇ ಮಾಡಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಕಾಂಗ್ರೆಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕೇರಳದ (Kerala) ಕೊಲ್ಲಂನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಉಲ್ಲಂಘಿಸಿ ಜಾರಿಗೆ ತಂದಿರುವ ಅನೇಕ ಕಾನೂನುಗಳನ್ನು ವಾಪಸ್ ಪಡೆಯುವುದಾಗಿ ಹೇಳಿದೆ. ಆದರೆ ಈ ಹಿಂದೆ ತೀವ್ರ ವಿರೋಧ ವ್ಯಕ್ತಪಡಿಸುತಿದ್ದ ಸಿಎಎ ಕಾಯ್ದೆಯನ್ನು ವಾಪಸ್ ಪಡೆಯುವ ಬಗ್ಗೆ ಒಂದು ಶಬ್ದವನ್ನೂ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿಲ್ಲ. ಕಾಂಗ್ರೆಸ್ (Congress) ಪಕ್ಷ ಉದ್ದೇಶಪೂರ್ವಕವಾಗಿಯೇ ತನ್ನ ಪ್ರಣಾಳಿಕೆಯಿಂದ ಸಿಎಎಯನ್ನು ಹೊರಗಿಟ್ಟಿದೆ.

ಇದು ಕಾಂಗ್ರೆಸ್ ಪಕ್ಷಕ್ಕೆ ಇರುವ ಭಯವನ್ನು ಇದು ತೋರಿಸುತ್ತದೆ. ಕಾಂಗ್ರೆಸ್ ಪಕ್ಷದ ಈ ದ್ವಂದ್ವ ನೀತಿಗೆ ಕೇರಳದ ಮತದಾರರು ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಹೇಳಿದರು. ಇನ್ನು ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದಕ್ಕೆ ಪಿಣರಾಯಿ ವಿಜಯನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕೇರಳದಲ್ಲಿ ಬಿಜೆಪಿ (BJP) ಯಾವುದೇ ಸ್ಥಾನವನ್ನು ಗೆಲ್ಲುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.

ಹೀಗಿರುವಾಗ ರಾಹುಲ್ ಗಾಂಧಿ ಕೇರಳಕ್ಕೆ ಬಂದು ಸ್ಪರ್ಧೆ ಮಾಡುವುದು ಎಷ್ಟು ಸರಿ? ಬಿಜೆಪಿ ಪ್ರಬಲವಿರುವ ರಾಜ್ಯಗಳಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸಬೇಕು. ಅಲ್ಲಿ ಬಿಜೆಪಿಯೊಂದಿಗೆ ಹೋರಾಟ ಮಾಡಬೇಕು ಎಂದು ಹೇಳಿದ್ದರು. ಇಂಡಿಯಾ ಒಕ್ಕೂಟದಲ್ಲಿ ಸಿಪಿಎಂ (CPM) ಪಕ್ಷವೂ ಭಾಗವಾಗಿದೆ. ಆದರೆ ಕೇರಳದಲ್ಲಿ ಕಾಂಗ್ರೆಸ್ ವಿರುದ್ಧ ಸಿಪಿಎಂ ಈ ಬಾರಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ವಯನಾಡು ಲೋಕಸಭಾ ಕ್ಷೇತ್ರದಿಂದ ರಾಹುಲ್ ಗಾಂಧಿ ಅವರು ಸ್ಪರ್ಧಿಸಿದ್ದರೇ, ಅವರ ವಿರುದ್ದ ಬಿಜೆಪಿ ಕಟ್ಟರ್ ಹಿಂದುತ್ವವಾದಿ ಕೆ. ಸುರೇಂದ್ರನ್ (K Surendran) ಅವರನ್ನು ಕಣಕ್ಕಿಳಿಸಿದೆ. ಈ ಬಾರಿ ವಯನಾಡಿನಲ್ಲಿ ಕಾಂಗ್ರೆಸ್-ಸಿಪಿಎಂ-ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.

Exit mobile version