`ಪೊಗರು’ ವಿಶೇಷ ಹಂಚಿಕೊಂಡ ಧ್ರುವ ಸರ್ಜಾ

“ಚಿತ್ರಕ್ಕೆ ಮೂರುವರೆ ವರ್ಷ ಆಯ್ತು. ನಾನು ನಿರ್ದೇಶಕರ ಜೊತೆ ಚರ್ಚೆ ಮಾಡಿ ನೆಕ್ಸ್ಟ್ ಲೆವಲ್ ಮಾದರಿಯ ಸಿನಿಮಾ ಮಾಡಬೇಕು ಅಂತ ತೀರ್ಮಾನಿಸಿಯೇ ಬಿಟ್ಟಿದ್ದೆ. ಆದರೆ ಇದಕ್ಕೆಲ್ಲ ಸಹಕಾರ ನೀಡಿದ ನಿರ್ಮಾಪಕರನ್ನು ಮೆಚ್ಚಲೇಬೇಕು. ಯಾಕೆಂದರೆ ನಾನು ಪಾತ್ರಕ್ಕಾಗಿ ದೇಹದಾರ್ಢ್ಯತೆ ಬೆಳೆಸಲು, ಇಳಿಸಲು ತಿಂಗಳಾನುಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದ್ದೆ. ಅಷ್ಟೆಲ್ಲ ಸಮಯವನ್ನು ಸಂಯಮದಿಂದ ಎದುರು ನೋಡಿದ ನಿರ್ಮಾಪಕರನ್ನು ನಾನು ಮೊದಲು ನೆನಪಿಸಿಕೊಳ್ಳಲೇಬೇಕು ಎಂದರು ಧ್ರುವ ಸರ್ಜಾ. ಅವರು ಈ ಮಾತನ್ನು ಹೇಳಿದ್ದು `ಪೊಗರು’ ಚಿತ್ರ ಬಿಡುಗಡೆಗೆ ಸಂಬಂಧಿಸಿದ ಸುದ್ದಿಗೋಷ್ಠಿಯಲ್ಲಿ.

“ನಾವು ಏನೇ ಸಿನಿಮಾ ಮಾಡಿದರೂ ಸಹ ಇದು ಬೇರೆ ಚಿತ್ರದಿಂದ ಕದ್ದಿರುವ ಕತೆ ಎನ್ನುವ ಆರೋಪ ಬರುತ್ತಿರುತ್ತದೆ. ಆದರೆ ಅಂಥ ಅಪವಾದಗಳಿಂದ ದೂರವಾಗಿರುವಂಥ ಚಿತ್ರ ಮಾಡಬೇಕು, ಎನ್ನುವ ಕಾರಣಕ್ಕೆ ಚಿತ್ರಕ್ಕೆ ಹೊಸ ಮಾದರಿಯ ಕತೆಯನ್ನು ಮಾಡಿದ್ದೇವೆ. ಅದಕ್ಕಾಗಿ ತಮಿಳಿನ ಪುದುಪೇಟೈ',ಆಯಿರತ್ತಿಲ್ ಒರುವನ್’, ಸೆವೆನ್ ಜಿ ರೈನ್ ಬೊ ಕಾಲನಿ',ಕಾದಲ್ ಕೊಂಡೇನ್’ ಚಿತ್ರಗಳ ಕತೆಗಾರ ಅರುಣ್ ಅವರು ನಮ್ಮ ನಿರ್ದೇಶಕ ನಂದ ಕಿಶೋರ್ ಜೊತೆಗೆ ಕುಳಿತು ಒರಿಜಿನಲ್ ಆಗಿ ಬರೆದಂಥ ಕತೆ ಇದು. ಚಿತ್ರದ ಒಂದು ದೃಶ್ಯವನ್ನು ಮಾಡಲು ಡಾ. ರಾಜ್ ಕುಮಾರ್ ಸ್ಫೂರ್ತಿಯಾಗಿದ್ದರು. ಅದು ಯಾವ ಚಿತ್ರ, ಯಾವ ದೃಶ್ಯ ಎನ್ನುವುದನ್ನು ನೀವು ಪರದೆಯ ಮೇಲೆಯೇ ನೋಡಿ” ಎಂದರು ಧ್ರುವ ಸರ್ಜಾ.

ಪೊಗರು ಚಿತ್ರವು ಫೆಬ್ರವರಿ 19ರಂದು ರಥ ಸಪ್ತಮಿಯ ದಿನ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ತಂತ್ರಜ್ಞರ ಪಾತ್ರ ದೊಡ್ಡದು. ಅದರ ಜೊತೆಗೆ ಕತೆಯೇ ಹೈಲೈಟ್ ಆಗಲಿದೆ. ಚಿತ್ರದಲ್ಲಿ ತಾಯಿ ಮಗ, ಅಜ್ಜಿ ಮೊಮ್ಮಗ, ಅಣ್ಣ ತಂಗಿ ಎಮೋಶನ್ಸ್ ಇರುತ್ತದೆ. ಅವೆಲ್ಲಕ್ಕಿಂತ ಸಾಕಷ್ಟು ಅಚ್ಚರಿಯ ವಿಚಾರಗಳು ಸಿನಿಮಾದಲ್ಲಿರುತ್ತವೆ. ಚಿತ್ರವು ತಮಿಳು ಮತ್ತು ತೆಲುಗಲ್ಲಿ ಏಕಕಾಲದಲ್ಲಿ ಸುಮಾರು ಒಂದು ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಪ್ರೇಕ್ಷಕರ ಪ್ರೋತ್ಸಾಹ ಹಿಂದಿನಂತೆ ಇರುವುದೆನ್ನುವ ನಿರೀಕ್ಷೆ ಇರಿಸಿದ್ದೇನೆ ಎಂದಿದ್ದಾರೆ ಧ್ರುವ ಸರ್ಜಾ. ಮಾಧ್ಯಮಗೋಷ್ಠಿಯಲ್ಲಿ ರಾಘವೇಂದ್ರ ರಾಜ್ ಕುಮಾರ್, ಗಿರಿಜಾ ಲೋಕೇಶ್, ಕರಿಸುಬ್ಬು, ಧರ್ಮ, ತಬಲಾ ನಾಣಿ, ಶಂಕರ್ ಆಶ್ವಥ್ ಮತ್ತು ಚಿತ್ರದ ನಿರ್ದೇಶಕ ನಂದ ಕಿಶೋರ್ ಮೊದಲಾವರು ಭಾಗವಹಿಸಿದ್ದರು.

Exit mobile version