ಪೊಲೀಸ್ ಸ್ಟೋರಿ ಕಾಲದಿಂದಲೂ ಕನ್ನಡದಲ್ಲಿ ಪೊಲೀಸ್ ನಾಯಕರ ಸಾಕಷ್ಟು ಚಿತ್ರಗಳು ಬಂದು ಹೋಗಿವೆ. ಆದರೆ ಅವೆಲ್ಲಕ್ಕಿಂತ ವಿಭಿನ್ನವಾಗಿ ಇಬ್ಬರು ಪೊಲೀಸ್ ನಾಯಕರ ನಡುವೆಯೇ ಸ್ಪರ್ಧೆ ಏರ್ಪಡುವಂಥ ಕತೆಯ ಚಿತ್ರವೊಂದರ ಮುಹೂರ್ತ ಮಲ್ಲೇಶ್ವರದಲ್ಲಿ ನೆರವೇರಿದೆ.
ಚಿತ್ರದ ನಾಯಕ ವಸಿಷ್ಠ ಸಿಂಹ ಮಾತನಾಡಿ, “ಸ್ನೇಹಿತರೆಲ್ಲ ಸೇರಿಕೊಂಡು ಒಂದೊಳ್ಳೆಯ ಸಿನಿಮಾ ಮಾಡಬೇಕೆಂದು ಹೊರಟಿದ್ದೇವೆ. ಚೆನ್ನಾಗಿ ಮೂಡಿಬರುವುದೆನ್ನುವ ಭರವಸೆ ಇದೆ. ಯಾಕೆಂದರೆ ಇಬ್ಬರ ನಡುವಿನ ಶೀತಲ ಸಮರದ ಕತೆಯನ್ನು ನಿರ್ದೇಶಕರು ನರೇಶನ್ ಮಾಡುವ ರೀತಿಯೇ ಆಕರ್ಷಕವಾಗಿದೆ. ಹಾಗಾಗಿಯೇ ಚಿತ್ರ ಒಪ್ಪಿಕೊಂಡೆ. ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರ ಸಂಗೀತದಲ್ಲಿ ನಾಲ್ಕು ಹಾಡುಗಳಿವೆ. ಈ ಹಿಂದೆ ಅವರ ಸಂಗೀತದಲ್ಲಿ ದಯವಿಟ್ಟು ಗಮನಿಸಿ ಚಿತ್ರಕ್ಕೆ ಹಾಡಿದ್ದೆ. ಇದೀಗ ಮತ್ತೆ ಈ ಚಿತ್ರದಲ್ಲಿಯೂ ಹಾಡು ನೀಡುವುದಾಗಿ ಹೇಳಿದ್ದಾರೆ” ಎಂದರು.
ನಿರ್ದೇಶಕ ಪವನ್ ಕುಮಾರ್ ಅವರ ಬಳಿ `ಲೂಸಿಯಾ’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವಂಥ ವಚನ್ ಮೊದಲ ಬಾರಿ ನಿರ್ದೇಶಕರಾಗಿರುವ ಚಿತ್ರ ಇದು. ಅದೇ ಸಂದರ್ಭದಲ್ಲಿ ಈ ಕತೆ ತಮ್ಮ ತಲೆಗೆ ಹೊಳೆದಿದ್ದು, ಇದನ್ನು ಛಾಯಾಗ್ರಾಹಕ ನವೀನ್ ಕುಮಾರ್ ಅವರಿಗೆ ತಿಳಿಸಿದ್ದರಂತೆ. ನವೀನ್ ಅವರು ವಸಿಷ್ಠ ಸಿಂಹ ಅವರನ್ನು ಭೇಟಿ ಮಾಡಿಸಿದ್ದರು. ಅವರು ನನಗೆ ನಿರ್ಮಾಪಕ ಜನಾರ್ದನ್ ಅವರನ್ನು ಪರಿಚಯಿಸಿದರು. ಒಟ್ಟಿನಲ್ಲಿ ಈಗ ಚಿತ್ರ ಸೆಟ್ಟೇರಿದೆ ಎಂದರು. ಚಿತ್ರದಲ್ಲಿ ಇಬ್ಬರು ನಾಯಕರು. ಒಬ್ಬರು ವಸಿಷ್ಠ ಸಿಂಹ ಆದಸರೆ ಮತ್ತೊಬ್ಬರು ಕಿಶೋರ್. ಎಲ್ಲವೂ ಸರಿಯಾಗಿದ್ದರೆ ಲಾಕ್ಡೌನ್ ಸಂದರ್ಭದಲ್ಲೇ ಚಿತ್ರ ಮಾಡಬೇಕಾಗಿತ್ತು. ಇನ್ನು ಸಂಕ್ರಾಂತಿಯ ಬಳಿಕ ಚಿತ್ರೀಕರಣ ಶುರು ಮಾಡುವ ಯೋಜನೆ ಇದೆ ಎಂದರು ವಚನ್. ಚಿಕ್ಕಣ್ಣ ಕೂಡ ಚಿತ್ರದಲ್ಲೊಂದು ಪ್ರಧಾನ ಪಾತ್ರ ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಜನರತ್ನ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳಲಿರುವ ಈ ಚಿತ್ರದ ಮುಹೂರ್ತದಲ್ಲಿ ನಿರ್ಮಾಪಕರ ಸಹೋದರಿ ಲತಾ ಶಿವಣ್ಣ ಕ್ಲ್ಯಾಪ್ ಮಾಡಿದರು. ನಿರ್ಮಾಪಕರ ಪುತ್ರಿ ಸ್ವೀಕೃತಿ ಕ್ಯಾಮೆರಾ ಚಾಲನೆ ನೀಡಿದರು.ಚಿತ್ರದಲ್ಲಿ ಬ್ಯಾಂಡ್ ಸೆಟ್ ಯುವಕನಾಗಿ ಕಾಣಿಸಿಕೊಳ್ಳಲಿರುವ ಧರ್ಮಣ್ಣ, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಸಂಭಾಷಣೆಕಾರ ಮಾಸ್ತಿ, ಸಂಕಲನಕಾರ ಹರೀಶ್, ಕಲಾ ನಿರ್ದೇಶಕ ಸತೀಶ್ ಮೊದಲಾದವರು ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.