ಪುನೀತ್‌ ನಿಧನದ ಬಳಿಕ ಯಶಸ್ವಿ ಪೋಲಿಸ್‌ ಭದ್ರತಾ ವ್ಯವಸ್ಥೆ:ಪೋಲಿಸರಿಗೆ ವಿಶೇಷ ಭತ್ಯೆ ಘೋಷಿಸಿದ ಗೃಹ ಸಚಿವರು

ಬೆಂಗಳೂರು: ನಟ ಪುನೀತ್ ರಾಜ್​​​ಕುಮಾರ್ ಅಂತಿಮ ದರ್ಶನದ ವೇಳೆ ಹರಿದು ಬಂದ ಜನಸಾಗರವನ್ನು ಅತ್ಯುತ್ತಮವಾಗಿ ನಿರ್ವಹಿಸಿ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ಪೊಲೀಸ್ ಸಿಬ್ಬಂದಿಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಹೃತ್ಪೂರ್ವಕವಾಗಿ ಅಭಿನಂದಿಸಿ, ಕರ್ತವ್ಯ ನಿರ್ವಹಿಸಿದ ಎಲ್ಲಾ ಪೊಲೀಸ್ ಪೇದೆಗಳಿಗೆ ವಿಶೇಷ ಭತ್ಯೆ ನೀಡುವುದಾಗಿ ಘೋಷಿಸಿದರು.

ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಪುನೀತ್ ರಾಜ್​​ಕುಮಾರ್ ಅವರ ನಿಧನದ ವೇಳೆ ಪೊಲೀಸರು ಎರಡು ರಾತ್ರಿ, ಹಗಲು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಿದ್ದಾರೆ. ಡಿಜಿ ಆಫೀಸ್​​ನಲ್ಲಿ ಎಲ್ಲರನ್ನೂ ಕರೆದು ಅಭಿನಂದನೆ ತಿಳಿಸಿದ್ದೇನೆ ಎಂದು ಮಾಹಿತಿ ನೀಡಿದರು

ಕಾನ್​​​ಸ್ಟೇಬಲ್ ಸೇರಿ ಎಲ್ಲರಿಗೂ ಭತ್ಯೆ ಕೊಡುತ್ತೇವೆ ಹಾಗೂ, ಹತ್ತು ದಿನಗಳ ಒಳಗಾಗಿ ಸಿಗುವ ಹಾಗೆ ಮಾಡುತ್ತೇನೆ. ಪೊಲೀಸರ ಶ್ರಮ ಬಹಳ ದೊಡ್ಡದಿದೆ, ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಸಿಎಂ ನೇತೃತ್ವದಲ್ಲಿ ನಾವು ಎಲ್ಲರೂ ಸೇರಿ ಕೆಲಸ ಮಾಡಿದ್ದೇವೆ ಎಂದು ಹೇಳಿದರು.

.

ಈ ಸಂದರ್ಭದಲ್ಲಿ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಮಾತನಾಡಿ, ಪುನೀತ್ ರಾಜ್​​ಕುಮಾರ್ ಅಕಾಲಿಕ ನಿಧನ ಹಾಗೂ ಕ್ಲಿಷ್ಟಕರವಾದ ಸನ್ನಿವೇಶದಲ್ಲಿ ಎಲ್ಲಾ ಪೊಲೀಸ್ ಅಧಿಕಾರಿಗಳು ಒಂದು ತಂಡವಾಗಿ ಕರ್ತವ್ಯ ನಿರ್ವಹಿಸಿ, ಪರಿಸ್ಥಿತಿ ನಿಭಾಯಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಸಹ ನಮ್ಮ ಜೊತೆಗೆ ಪ್ರೇರಕ ಶಕ್ತಿಯಾಗಿ ನಿಂತಿದ್ದರು ಎಂದು ತಿಳಿಸಿದರು.

ಅನಿರೀಕ್ಷಿತ ಹಾಗೂ ಸವಾಲಿನ ಸಂದರ್ಭವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ಗಳಿಸಿದ ಅನುಭವವನ್ನು ಒಂದು ಮಾದರಿ ಕೇಸ್ ಸ್ಟಡಿ ಆಗಿ ದಾಖಲಿಸಬೇಕು ಎಂದೂ ತಿಳಿಸಿದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸಹ ತಮ್ಮ ಅನುಭವವನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು.

Exit mobile version