ಅರ್ಥಹೀನ ಚರ್ಚೆಯಲ್ಲೇ ಕಾಲಕಳೆಯುತ್ತಿರುವ ರಾಜಕೀಯ ಪಕ್ಷಗಳು!

ರಾಜ್ಯದಲ್ಲಿ ರಾಜಕೀಯ ಚರ್ಚೆಗಳು(Political Discussions) ಅರ್ಥಹೀನವಾಗಿವೆ. ಪ್ರತಿದಿನ ಪತ್ರಿಕೆಗಳಲ್ಲಿ ಮುಖಪುಟವಾಗುವ ಹಂಬಲದಿಂದ ಮೂರು ಪಕ್ಷಗಳ ನಾಯಕರು ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಾ, ಜನರಿಗೆ ಮನರಂಜನೆ ನೀಡುತ್ತಿದ್ದಾರೆ.

ರಾಜಕೀಯ(Political) ನಾಯಕರ ಮಾತುಗಳು ಅರ್ಥಹೀನವಾಗುತ್ತಿದ್ದು, ಜನರ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಸರ್ಕಾರದ ಆಡಳಿತದಲ್ಲಿನ ಲೋಪಗಳನ್ನು ಟೀಕಿಸಬೇಕಿದ್ದ ವಿಪಕ್ಷಗಳು ದಾರಿ ತಪ್ಪಿವೆ. ಮತಬ್ಯಾಂಕ್(VoteBank) ಕೇಂದ್ರೀತ ವಿಷಯಗಳ ಕಡೆಗೆ ವಿಪಕ್ಷಗಳು ಹೆಚ್ಚಿನ ಆಸಕ್ತಿ ತೋರುತ್ತಿವೆ. ರಾಜ್ಯ ಸರ್ಕಾರದ ವಿರುದ್ದ ಪ್ರಬಲವಾಗಿ ಕೇಳಿಬಂದಿರುವ 40% ಕಮಿಷನ್(Commission) ಆರೋಪದ ಮೇಲೆ ರಾಜ್ಯಾದ್ಯಂತ ಹೋರಾಟ ಮಾಡಬೇಕಿದ್ದ ವಿಪಕ್ಷಗಳು, ಟ್ವೀಟ್ ಮಾಡಿ ತಮ್ಮ ಆಕ್ರೋಶ ಹೊರಹಾಕಿ ಸುಮ್ಮನಾದವು.

ಪಿಎಸ್‍ಐ ನೇಮಕಾತಿ ಹಗರಣದ(PSI Recruitment Scam) ಕುರಿತು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕಿದ್ದ ವಿಪಕ್ಷಗಳು ಯಥಾಪ್ರಕಾರ ಮಾದ್ಯಮಗಳಿಗೆ ಹೇಳಿಕೆ ನೀಡುತ್ತಲೇ ಕಾಲಹರಣ ಮಾಡಿದವು. ವಿಪಕ್ಷಗಳು ಸರ್ಕಾರವನ್ನು ಟೀಕಿಸುವ ಬದಲು ವೈಯಕ್ತಿಕ ಟೀಕೆಗಳನ್ನು ಮಾಡಿ, ಇಡೀ ಚರ್ಚೆಯ ಹಾದಿಯನ್ನೇ ಬದಲಾಯಿಸಿವೆ.
ಆರ್‍ಎಸ್‍ಎಸ್ ಸಂಘಟನೆ ಕುರಿತು ಮಾತನಾಡಿದಷ್ಟು ಪಿಎಸ್‍ಐ ನೇಮಕಾತಿ ಹಗರಣ ಮತ್ತು 40% ಕಮಿಷನ್ ಕುರಿತು ವಿಪಕ್ಷ ನಾಯಕರು ಮಾತನಾಡಲಿಲ್ಲ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರು ವೈಯಕ್ತಿಕ ಕಾರಣದಿಂದ ಸರ್ಕಾರವನ್ನು ಟೀಕಿಸುವಾಗ ಭಿನ್ನ ನಿಲುವುಗಳನ್ನು ತೆಗೆದುಕೊಂಡರು.

ಹೀಗಾಗಿ ವಿಪಕ್ಷಗಳಲ್ಲೇ ಒಗ್ಗಟ್ಟು ಇಲ್ಲದಂತಾಗಿದೆ. ಇದರಿಂದ ಯಾವ ಚರ್ಚೆಯೂ ಗಂಭೀರವಾಗಿ ನಡೆಯುತ್ತಿಲ್ಲ. ಇನ್ನು ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ, ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಾ ಮೂರು ಪಕ್ಷಗಳ ನಾಯಕರು ಕಾಲಹರಣ ಮಾಡುತ್ತಿದ್ದಾರೆ. ದಾಖಲೆಗಳಿಲ್ಲದೇ ಆರೋಪ ಮಾಡಿ, ಎರಡು ದಿನ ಸುದ್ದಿಯಾಗಿ, ಸುಮ್ಮನಾಗುವರ ಸಂಖ್ಯೆ ಹೆಚ್ಚಾಗುತ್ತಿದೆ.

ಆರೋಪಕ್ಕೆ ತಾರ್ಕಿಕ ಅಂತ್ಯ ನೀಡುವ ಪರಿಪಾಠವೇ ಇಲ್ಲದಂತಾಗಿವೆ. ಹೀಗಾಗಿ ರಾಜಕೀಯ ಚರ್ಚೆಗಳು ಅರ್ಥಹೀನವಾಗುತ್ತಿವೆ.

Exit mobile version