ಸಾಯಿಕುಮಾರ್ ಗೆ ಶುಭ ಕೋರಿದ ಪವರ್ ಸ್ಟಾರ್

ಅಂದಹಾಗೆ ಇದು ಯಾವುದೋ ಸಿನಿಮಾ ಮುಹೂರ್ತದಲ್ಲಿ ಶುಭ ಕೋರಿರುವ ಸುದ್ದಿಯಲ್ಲ. ಡೈಲಾಗ್ ಕಿಂಗ್ ಸಾಯಿಕುಮಾರ್ ಅವರ ಪುತ್ರಿಯ ಫುಡ್ ಪ್ರಾಡಕ್ಟ್ ಸಂಸ್ಥೆಗೆ ಪುನೀತ್ ರಾಜ್ ಕುಮಾರ್ ಶುಭ ಹಾರೈಸಿದ್ದಾರೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ಜ್ಯೋತಿರ್ಮಯಿ ಅವರು ತಮ್ಮ ಪತಿ ಕೃಷ್ಣ ಪಲ್ಗುಣ ಅವರೊಂದಿಗೆ ಸೇರಿಕೊಂಡು ಆರಂಭಿಸಿರುವ ಮಕ್ಕಳ ಆಹಾರದ ಸಂಸ್ಥೆ `ಫುಡ್ ಸ್ಟೆಪ್‌’ನ ಉದ್ಘಾಟನಾ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಇಂಥ ಮಕ್ಕಳ ಫುಡ್ ಪ್ರಾಡಕ್ಟ್‌ಗಳನ್ನು ನಾವು ವಿದೇಶಗಳಲ್ಲಿ ಮಾತ್ರ ನೋಡುತ್ತಿದ್ದೆವು. ಈಗ ನಮ್ಮಲ್ಲಿಗೂ ಬಂದಿರುವುದು ಖುಷಿಯ ವಿಚಾರ. ಇದು ನಮ್ಮ ಎಲ್ಲ ತಾಯಂದಿರಿಗೂ ಸಹಾಯವಾಗುತ್ತದೆ. ಜ್ಯೋತಿರ್ಮಯಿ ಅವರ ಸಂಸ್ಥೆ ಉತ್ತಮವಾಗಿ ಬೆಳೆಯಲಿ” ಎಂದು ಪುನೀತ್ ರಾಜ್ ಕುಮಾರ್ ಅವರು ಶುಭ ಕೋರಿದರು. ಡಾ. ಜ್ಯೋತಿರ್ಮಯಿ ಅವರು ಮಕ್ಕಳ ಪಿಡಿಯಾಟ್ರಿಶನ್ ಆಗಿ ಹೆಸರು ಮಾಡಿದವರು. ಇದೀಗ ಮಕ್ಕಳಿಗೆ ರುಚಿಸುವಂಥ ಪೌಷ್ಠಿಕಾಂಶ ಭರಿತ ಆಹಾರದ ತಯಾರಿ ಮಾಡಿದ್ದಾರೆ. `ಫುಡ್ ಸ್ಟೆಪ್ಸ್’ ಪ್ರಾಡಕ್ಟ್‌ನ ಬಿಡುಗಡೆಯ ಸಂದರ್ಭದಲ್ಲೇ ಅಧಿಕೃತ ಜಾಹೀರಾತು ಕೂಡ ಬಿಡುಗಡೆಗೊಳಿಸಲಾಯಿತು. ಆ ಜಾಹೀರಾತನ್ನು ಸಾಯಿಕುಮಾರ್ ಅವರ ಸಹೋದರ ರವಿಶಂಕರ್ ಅವರ ಪುತ್ರ ಅದ್ವಯ್ ನಿರ್ದೇಶಿಸಿದ್ದಾರೆ. ಆ ಜಾಹೀರಾತಿನ ಬಗ್ಗೆಯೂ ಪುನೀತ್ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮೊದಲ ಪ್ರಾಡಕ್ಟ್ ಪಡೆಯುವ ಸೆಲೆಬ್ರಿಟಿ ಗ್ರಾಹಕಿಯಾಗಿ ಶ್ವೇತಾ ಶ್ರೀವಾತ್ಸವ ತಮ್ಮ ಪುಟ್ಟ ಮಗುವಿನ ಜೊತೆಗೆ ಆಗಮಿಸಿದ್ದರು. ಸಾಯಿಕುಮಾರ್ ಸಹೋದರರು ಮತ್ತು ಜನಪ್ರಿಯ ಕಲಾವಿದರಾದ ರವಿಶಂಕರ್, ಅಯ್ಯಪ್ಪ ಶರ್ಮ ಸೇರಿದಂತೆ ಪೂರ್ತಿ ಕುಟುಂಬ ಈ ಸಂದರ್ಭದಲ್ಲಿ ಉಪಸ್ಥಿತಿಯಿತ್ತು.

Exit mobile version