ಪ್ರಜ್ವಲ್ ‘ಅಬ್ಬರ’ದ ಪ್ರವೇಶ

“ಕೊರೊನಾದಿಂದ ಬಾಳಲ್ಲಿ ಮೂಡಿದ್ದ ಬರದಿಂದ ದೂರಾಗಿ ಅಬ್ಬರದ ಮೂಲಕ ಬರುತ್ತಿದ್ದೇನೆ. ರಾಮನಾರಾಯಣ್ ಅವರು ಒಳ್ಳೆಯ ಕಮರ್ಷಿಯಲ್ ಡೈರೆಕ್ಟರ್ ಎಂದು ಬಹಳ ಮಂದಿಯಿಂದ ಕೇಳಿದ್ದೆ. ಅದನ್ನು ನಿಜ ಮಾಡಿದ್ದಾರೆ. ನಾನು ಮಾಡಿರುವ ಸಕ್ಸಸ್ ಫುಲ್ ಪಾತ್ರಗಳನ್ನು ಇರಿಸಿಕೊಂಡು ಮೂರು ಶೇಡ್ ಗಳಲ್ಲಿ ನಟಿಸುವ ಅವಕಾಶ ದೊರಕಿದೆ” ಎಂದರು ಚಿತ್ರದ ನಾಯಕ ಪ್ರಜ್ವಲ್ ದೇವರಾಜ್.
ಈ‌ ಚಿತ್ರದಲ್ಲಿ ರವಿ ಬಸ್ರೂರು ಅವರ ಹಾಡುಗಳು ಹೈಲೈಟ್ ಆಗಿರುತ್ತವೆ. ಈ ಹಿಂದೆ ನನ್ನ ‘ಮೃಗಶಿರ’ದಲ್ಲಿ ಅವರು ಸಂಗೀತ ನೀಡಿದ್ದರು. ಇದು ಅದಕ್ಕಿಂತ ವಿಭಿನ್ನವಾಗಿದೆ; ಮಾತ್ರವಲ್ಲ ಅವರು ಮೊದಲು ಕೊಟ್ಟ ಟ್ಯೂನ್ ಮತ್ತೆ ಬದಲಾಯಿಸಬೇಕಾಗೇ ಬಂದಿಲ್ಲ” ಎಂದರು.

ಚಿತ್ರದ ನಾಯಕಿಯರಲ್ಲೊಬ್ಬರಾದ ನಿಮಿಕಾ ರತ್ನಾಕರ್ ಮಾತನಾಡಿ, “ಇಂಥದೊಂದು ‌ಒಳ್ಳೆಯ ತಂಡದೊಂದಿಗೆ ಕೆಲಸ ಮಾಡಿರುವುದರಲ್ಲಿ ಖುಷಿ ಇದೆ. ನಿರ್ದೇಶಕ‌ ರಾಮ್ ನಾರಾಯಣ್ ಸರ್ ಅವರು ನಮ್ಮೆಲ್ಲರ ಪಾತ್ರಗಳ ನಟನೆಯ ಬಗ್ಗೆ ತುಂಬ ಪರ್ಟಿಕ್ಯುಲರ್ ಆಗಿ ಇದ್ದರು. ಒಬ್ಬೊಬ್ಬರ ಪಾತ್ರವೂ ಒಂದೊಂದು ರೀತಿಯಾಗಿದೆ ಮತ್ತು ಪ್ರಜ್ವಲ್ ಅವರ ಪಾತ್ರವಂತೂ ಸಾಕಷ್ಟು ವೈವಿಧ್ಯಮಯವಾಗಿದೆ. ಒಟ್ಟಿನಲ್ಲಿ‌ ಚಿತ್ರೀಕರಣ ಖುಷಿ ತಂದಿದೆ” ಎಂದರು. ಮತ್ತೋರ್ವ ನಾಯಕಿ ನಟಿ‌ ಲೇಖಾಚಂದ್ರ ಮಾತನಾಡಿ, “ಚಿತ್ರದಲ್ಲಿ ನನ್ನದು ಡಾಕ್ಟರ್ ಪಾತ್ರ. ಆದರೆ ಪೇಶೆಂಟದ ಆಗಿರುತ್ತೇನೆ. ಅದೇ ವಿಶೇಷ. ಈ ರೀತಿಯ ಪಾತ್ರ ಮಾಡಬಲ್ಲೆ ನಂಬಿಕೆ ಇರಲಿಲ್ಲ. ಆದರೆ ಅದನ್ನು ಸಾಬೀತು ಮಾಡುವ ಅವಕಾಶ ದೊರಕಿದೆ. ಚಿತ್ರದ ಕ್ಲೈ ಮ್ಯಾಕ್ಸ್ ಕೂಡ ತುಂಬ ಚೆನ್ನಾಗಿದೆ” ಎಂದರು. ಮೂರನೇ ನಾಯಕಿ ರಾಜಶ್ರೀ ಪೊನ್ನಪ್ಪ ಅವರು ತಮಗೆ ಚಿತ್ರದ ಮೂಲಕ ಒಂದೊಳ್ಳೆಯ ರಿ ಎಂಟ್ರಿ ದೊರಕಿದೆ. ತಾನು ಇದುವರೆಗೆ ನಿರ್ವಹಿಸಿದ್ದ ಪಾತ್ರಗಳಿಗಿಂತ ವಿಭಿನ್ನವಾದ ಕ್ಯಾರೆಕ್ಟರ್ ಮಾಡುವ ಅವಕಾಶ ದೊರಕಿದೆ ಎಂದರು.

ನಿರ್ದೇಶಕ ರಾಮ್ ನಾರಾಯಣ್ ಅವರು ಚಿತ್ರದ ಬಗ್ಗೆ ಯಾವುದೇ ಮಾಹಿತಿ ನೀಡುವುದು ಸಸ್ಪೆನ್ಸ್ ಹೊರಗೆಡಹಿದಂತಾಗುತ್ತದೆ ಎಂದರು. ಆದರೆ “ಇದು ದುಷ್ಟ ಸಂಹಾರಕ್ಕಾಗಿ ಭಗವಂತ ಎತ್ತುವ ಅವತಾರದಂಥ ಪಾತ್ರ ಎಂದರು. ಅಂದರೆ ನಾಯಕ ಹಲವು ಅವತಾರಗಳ ಮೂಲಕ ಹೇಗೆ ಖಳರನ್ನು ಎದುರಿಸುತ್ತಾನೆ ಮತ್ತು ತಂದೆಯ ಮೇಲಿರುವ ಗೌರವದಿಂದಾಗಿ ಪ್ರೀತಿಸಿದ ಹುಡುಗಿಯನ್ನೇ ಹೇಗೆ ಪ್ರತಿಕಾರಕ್ಕಾಗಿ ಬಳಸುತ್ತಾನೆ ಎನ್ನುವುದನ್ನು ತೋರಿಸಿರುವಂಥ ಚಿತ್ರ” ಎಂದರು. ಅಂದಹಾಗೆ ಚಿತ್ರದಲ್ಲಿ ರವಿಶಂಕರ್ ಅವರು ಖಳನಾಗಿ ನಟಿಸಿದ್ದು ಅವರ ಪಾತ್ರದಲ್ಲಿಯೂ‌ ವಿಭಿನ್ನ ಶೇಡ್ಸ್ ಇವೆ ಎಂದರು.

ಬಸವರಾಜ ಮಂಚಯ್ಯ ಹಿತ್ತಲಪುರ ನಿರ್ಮಾಣದ ಈ‌ ಚಿತ್ರದಲ್ಲಿ ಶೋಭರಾಜ್,ಶಂಕರ್ ಅಶ್ವಥ್, ಕೋಟೆ ಪ್ರಭಾಕರ್, ವಿಕ್ಟರಿ ವಾಸು, ವಿಜಯ್ ಚೆಂಡೂರ್, ಮಮತಾ ರಾಹುತ್ ಮೊದಲಾದ ದೊಡ್ಡ ತಾರಾಬಳಗವೇ ಇದೆ. ಮುಕ್ಕಾಲು ಪಾಲು ಚಿತ್ರೀಕರಣ ಪೂರ್ತಿಯಾಗಿದ್ದು ಮುಂದಿನ ವರ್ಷ ತೆರೆಕಾಣಲಿರುವುದು ಖಚಿತ ಎಂದು ತಂಡ ತಿಳಿಸಿದೆ.

Exit mobile version