ಕಾಂಗ್ರೆಸ್ ಪಕ್ಷ ಸೇರಲು ನಿರಾಕರಿಸಿದ ಪ್ರಶಾಂತ್ ಕಿಶೋರ್!

prashanth kishore

ಕಳೆದ ಒಂದು ತಿಂಗಳಿಂದ ಸರಣಿ ಸಭೆಗಳನ್ನು ನಡೆಸುವ ಮೂಲಕ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್(Prashanth Kishore) ಕಾಂಗ್ರೆಸ್(Congress) ಪಕ್ಷವನ್ನು ಸೇರುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇದೀಗ ನಾನು ಕಾಂಗ್ರೆಸ್ ಪಕ್ಷವನ್ನು ಸೇರುವ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದೇನೆ ಎಂದು ಪ್ರಶಾಂತ್ ಕಿಶೋರ್ ಟ್ವೀಟ್(Tweet) ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi) ಅವರೊಂದಿಗೆ ಮೂರು ಸಭೆಗಳನ್ನು ನಡೆಸಿದ್ದರು. ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಿದ್ದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಂದಿಗೂ ಪ್ರಶಾಂತ್ ಸಭೆ ನಡೆಸಿದ್ದರು. ಕಾಂಗ್ರೆಸ್ ಪಕ್ಷದ ಪುನಶ್ಚೇತನಕ್ಕೆ ರೂಪರೇಷಗಳನ್ನು ಸಿದ್ದಪಡಿಸಿದ್ದರು. ಆದರೆ ಅಂತಿಮವಾಗಿ ನಾನು ಕಾಂಗ್ರೆಸ್‍ವನ್ನು ಸೇರುವುದಿಲ್ಲ ಎನ್ನುವ ಮೂಲಕ ಪ್ರಶಾಂತ್ ಕಿಶೋರ್ ಅಚ್ಚರಿ ಮೂಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, “ಚುನಾವಣಾ ತಂತ್ರಗಾರಿಕೆ ಭಾಗವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮತ್ತು ಚುನಾವಣಾ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಕಾಂಗ್ರೆಸ್ ಪ್ರಸ್ತಾಪವನ್ನು ನಾನು ನಿರಾಕರಿಸಿದೆ. ನನ್ನ ಅಭಿಪ್ರಾಯದ ಪ್ರಕಾರ ರಚನಾತ್ಮಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಕಾಂಗ್ರೆಸ್ ಪಕ್ಷಕ್ಕೆ ಮುಖ್ಯವಾಗಿ ಬೇಕಾಗಿರುವುದು ಸರಿಯಾದ ನಾಯಕತ್ವ” ಎಂದಿದ್ದಾರೆ.

ಇನ್ನು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ತೆಗೆದುಕೊಂಡಿರುವ ಈ ನಿರ್ಧಾರ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪ್ರಶಾಂತ್ ಕಿಶೋರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಮತ್ತು ಚುನಾವಣಾ ಜವಾಬ್ದಾರಿ ನೀಡಲು ಕಾಂಗ್ರೆಸ್ ಅನುಸರಿಸಿದ ವಿಳಂಬ ನೀತಿಯಿಂದ ಪ್ರಶಾಂತ್ ಕಿಶೋರ್ ಅವಮಾನಿತರಾಗಿದ್ದು, ಹೀಗಾಗಿ ಅವರು ಕಾಂಗ್ರೆಸ್‍ನಿಂದ ದೂರ ಸರಿದಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಪ್ರಶಾಂತ್ ಕಿಶೋರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಹಲವು ನಾಯಕರೊಂದಿಗೆ ಕುರಿತು ಸರಣಿ ಸಭೆಗಳನ್ನು ನಡೆಸಿತ್ತು. ಆದರೆ ಅಂತಿಮ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿತ್ತು.

ಕಾಂಗ್ರೆಸ್‍ನ ಈ ನಡೆಯಿಂದ ಬೇಸತ್ತು ಪ್ರಶಾಂತ್ ಕಿಶೋರ್ ಪಕ್ಷಕ್ಕೆ ಸೇರ್ಪಡೆಯಾಗಲು ನಿರಾಕರಿಸಿದ್ದಾರೆ. ಇನ್ನೊಂದೆಡೆ ಪ್ರಶಾಂತ್ ಕಿಶೋರ್ ಸೂಚಿಸಿರುವ ನಾಯಕತ್ವ ಬದಲಾವಣೆ ಪ್ರಸ್ತಾವನೆಯನ್ನು ಕಾಂಗ್ರೆಸ್ ತಿರಸ್ಕರಿಸಲಾಗಿತ್ತು ಎನ್ನಲಾಗಿದೆ.

Exit mobile version