ಹಿಂದೂಸ್ ನೆವರ್ ಆಕ್ಟ್, ಓನ್ಲಿ ರಿಯಾಕ್ಟ್ : ಪ್ರತಾಪ ಸಿಂಹ!

prathap simha

ಹಿಂದೂಗಳು ಯಾವತ್ತೂ ಯಾವುದನ್ನು ಕೈಗೊತ್ತಿಕೊಳ್ಳುವುದಿಲ್ಲ, ಆದರೆ ಕ್ರಿಯೆಗೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ. ‘ಹಿಂದೂಸ್ ನೆವರ್ ಆಕ್ಟ್, ಓನ್ಲಿ ರಿಯಾಕ್ಟ್’ ಎಂದು ಮೈಸೂರು ಸಂಸದ(Mysuru MP) ಪ್ರತಾಪ ಸಿಂಹ(Prathap Simha) ಪ್ರತಿಕ್ರಿಯಿಸಿದ್ದಾರೆ. ಮೈಸೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿ(Tippu Jayanthi) ಮಾಡುವ ಮೂಲಕ ಹತ್ತಾರು ಹಿಂದೂಗಳ ಕೊಲೆಗೆ ಸಿದ್ದರಾಮಯ್ಯ ಸರ್ಕಾರ ದಾರಿ ಮಾಡಿಕೊಟ್ಟಿತು.

ರಾಜಕೀಯಕ್ಕಾಗಿ ಈ ರೀತಿಯ ಕೃತ್ಯಗಳಿಗೆ ಮತ್ತು ಜಿಹಾದಿ ಮನಸ್ಥಿತಿಗಳಿಗೆ ಪ್ರೋತ್ಸಾಹ ಕೊಟ್ಟರೆ ಭಾರತ ಮತ್ತೊಂದು ಪಾಕಿಸ್ತಾನ ಅಥವಾ ಬಾಂಗ್ಲಾದೇಶದ ರೀತಿ ಪ್ರತ್ಯೇಕವಾಗುತ್ತದೆ. ಅಧಿಕಾರ ಎಂಬುದು ಶಾಶ್ವತವಲ್ಲ. ಆದರೆ ಅಧಿಕಾರಕ್ಕಾಗಿ ಶಾಶ್ವತವಾಗಿರುವ ಭಾರತವನ್ನು ಒಡೆಯುವ ಪ್ರಯತ್ನ ಮಾಡಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರತಾಪ ಸಿಂಹ ವಾಗ್ದಾಳಿ ನಡೆಸಿದರು. ಇನ್ನು ಕೋಲಾರದಲ್ಲಿ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, 2015ರಲ್ಲಿ ಸಿದ್ದರಾಮಯ್ಯ ಸರ್ಕಾರ ಎಸ್‍ಡಿಪಿಐ ಮತ್ತು ಕೆಎಫ್‍ಡಿ ನಂತಹ ಮೂಲಭೂತ ಸಂಘಟನೆಗಳ ಮೇಲಿದ್ದ ಪ್ರಕರಣಗಳನ್ನು ವಾಪಸ್ ಪಡೆಯಿತು.

ಕ್ರಿಮಿನಲ್‍ಗಳನ್ನು ಓಡಾಡಿಕೊಂಡಿರಲು ಅವಕಾಶ ಮಾಡಿಕೊಟ್ಟರು. ಹೀಗಾಗಿ ರಾಜ್ಯದಲ್ಲಿ ಧಾರ್ಮಿಕ ವಿಚಾರವಾಗಿ ಜಿಹಾದಿ ಮನಸ್ಥಿತಿಯವರು ಸರಣಿ ಹತ್ಯೆಗಳನ್ನು ಮಾಡಿದರು. ರಾಜು, ಪ್ರವೀಣ ಪೂಜಾರಿ, ಕುಟ್ಟಪ್ಪ ಸೇರಿದಂತೆ ನಮ್ಮ ಅನೇಕ ಹಿಂದೂ ಕಾರ್ಯಕರ್ತರ ಹತ್ಯೆಗಳಾದವು. ಟಿಪ್ಪು ಜಯಂತಿ ಮಾಡುವ ಮೂಲಕ ರಾಜ್ಯದಲ್ಲಿ ತಾಲಿಬಾನ್ ಮನಸ್ಥಿತಿಗಳಿಗೆ ಸಿದ್ದರಾಮಯ್ಯ ಪ್ರೋತ್ಸಹ ಕೊಟ್ಟರು. ಈಗ ಮತ್ತೇ 2023ಕ್ಕೆ ಅಧಿಕಾರಕ್ಕೆ ಬರುವ ದೃಷ್ಟಿಯಿಂದ ಇಂತಹ ಘಟನೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರವಾಗಿ ಮಾತನಾಡಿ, ಹಿಜಾಬ್ ವಿಚಾರದಲ್ಲಿ ನ್ಯಾಯಾಲಯ ನೀಡಿದ ಆದೇಶ ವಿರುದ್ದ ಹೋದವರು ನಮ್ಮದು ತಪ್ಪಾಯಿತು ಎಂದು ಸಾರ್ವಜನಿಕವಾಗಿ ಕೇಳಿಕೊಳ್ಳಬೇಕು. ಸಿದ್ದರಾಮಯ್ಯ ಸೇರಿದಂತೆ ಕೆಲ ನಾಯಕರು ಈ ರೀತಿಯ ಘಟನೆಗಳಿಗೆ ಕುಮ್ಮಕ್ಕು ನೀಡುವುದನ್ನು ನಿಲ್ಲಿಸಬೇಕು. ಅಲ್ಲಿಯವರೆಗೂ ಇಂತಹ ಅಭಿಯಾನಗಳು ನಿಲ್ಲುವುದಿಲ್ಲ ಎಂದರು.

Exit mobile version