ಪ್ರಿಯಾಂಕಾ `ಉಗ್ರಾವತಾರ’ಕ್ಕೆ ಉಪ್ಪಿ ಶ್ಲಾಘನೆ!

ಸಾಮಾನ್ಯವಾಗಿ ಪತ್ನಿ ಶಾಂತ ಸ್ವರೂಪಿಯಾಗಿರುವುದನ್ನು ಎಲ್ಲ ಗಂಡಂದಿರು ಬಯಸುತ್ತಾರೆ. ಆದರೆ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಪತ್ನಿಯ `ಉಗ್ರಾವತಾರ’ ಕಂಡು ಹಾಡಿ ಹೊಗಳಿದ್ದಾರೆ! ಗೊಂದಲ ಬೇಕಾಗಿಲ್ಲ; ಇದು ಪ್ರಿಯಾಂಕಾ ನಟನೆಯ ಉಗ್ರಾವತಾರ ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆಯ ವೇಳೆ ಉಪೇಂದ್ರ ಅವರು ಮಾಡಿದಂಥ ಪ್ರಶಂಸೆಯ ಮಾತಿನ ವಿಚಾರ ಅಷ್ಟೇ!

ಪ್ರಿಯಾಂಕಾ ಅವರ ಜನ್ಮದಿನದ ಪ್ರಯುಕ್ತ ಅವರ ಸ್ವಗೃಹದಲ್ಲಿ ನಡೆದ ಉಗ್ರಾವತಾರ ಚಿತ್ರ ತಂಡದ ವಿಶೇಷ ಕಾರ್ಯಕ್ರಮದಲ್ಲಿ ಮೋಶನ್ ಪೋಸ್ಟರ್ ಬಿಡುಗಡೆಗೊಳಿಸಿದ ಉಪೇಂದ್ರ ಅವರು,”ಈ ಹಿಂದೆ ಈ ರೀತಿ ಉಗ್ರಾವತಾರದ ನಾಯಕಿಯಾಗಿ ಮಾಲಾಶ್ರೀಯವರನ್ನು ನೋಡಿದ್ದೇವೆ. ಆದರೆ ಈಗ ಪ್ರಿಯಾಂಕಾ ಅವರು ಅಂಥದೊಂದು ಪಾತ್ರ ಮಾಡಿರುವುದು ಪೋಸ್ಟರ್ ಮೂಲಕ ರಿವೀಲ್ ಆಗಿದೆ. ತಂಡಕ್ಕೆ ಶುಭವಾಗಲಿ” ಎಂದರು. ಬಳಿಕ ಬರ್ತ್ ಡೇ ಕೇಕ್ ಕತ್ತರಿಸಿದ ಪ್ರಿಯಾಂಕ ಕುಟುಂಬ ಮತ್ತು ಚಿತ್ರತಂಡದ ಜೊತೆಗೆ ಸಿಹಿ ಹಂಚಿ ಸಂಭ್ರಮಿಸಿದರು.

ಮಾಧ್ಯಮದ ಜೊತೆ ಮಾತನಾಡಿ “ಇದು ಲಾಕ್ಡೌನ್ ಗೆ ಮೊದಲೇ ಶುರುವಾಗಿದ್ದ ಚಿತ್ರ. ನಾನು ಸಿನಿಮಾದಲ್ಲಿ ಆಕ್ಷನ್ ಮಾಡ್ತೀನಿ ಅಂತ ಕನಸಲ್ಲಿಯೂ ಅಂದುಕೊಂಡಿರಲಿಲ್ಲ. ಮಾಡುತ್ತಿರುವ ಬಗ್ಗೆ ಹೇಳಿದಾಗ ಮನೆಯಲ್ಲಿಯೂ ಅಚ್ಚರಿಗೊಂಡಿದ್ದಾರೆ. ಪಾತ್ರಕ್ಕಾಗಿ ವರ್ಕೌಟ್ ಮಾಡುತ್ತೇನೆ. ಮಹಿಳೆಯರಿಗೆ ಸಂಬಂಧಿಸಿದ ತುಂಬ ಸಾಂದರ್ಭಿಕ ವಿಚಾರಗಳನ್ನು ಇರಿಸಿಕೊಂಡು ಚಿತ್ರ ಮಾಡಿದ್ದೇವೆ. ನನಗಂತೂ ತುಂಬ ಚಾಲೆಂಜಿಂಗ್ ಆಗಿರುವ ಹೊಡೆದಾಟದ ದೃಶ್ಯಗಳಿವೆ. ಈ ಪಾತ್ರ ಮಾಡುವುದಕ್ಕೆ ಸಾಕಷ್ಟು ಮಹಿಳಾ ಪೊಲೀಸ್ ಅಧಿಕಾರಿಗಳು ನನಗೆ ಸ್ಫೂರ್ತಿಯಾಗಿದ್ದಾರೆ. ಚಿತ್ರವನ್ನುಎಲ್ಲ ಮಹಿಳೆಯರಿಗಾಗಿ ಡೆಡಿಕೇಟ್ ಮಾಡುವುದಾಗಿ” ಹೇಳಿದ್ದಾರೆ. ಗುರುಮೂರ್ತಿಯವರ ನಿರ್ದೇಶನದ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಇರಿಸಲಾಗಿದೆ.

Exit mobile version