ಪಿಎಸ್‍ಐ ಮರು ಪರೀಕ್ಷೆಗೆ ರಾಜ್ಯ ಸರ್ಕಾರ ನಿರ್ಧಾರ!

homeminister

ಪಿಎಸ್‍ಐ(PSI) ಪರೀಕ್ಷೆಯಲ್ಲಿ ಅಕ್ರಮ(Illegal) ನಡೆದಿದ್ದು, ಈ ಹಿಂದೆ ನಡೆದಿರುವ ಇಡೀ ನೇಮಕಾತಿ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ(State Government) ರದ್ದು ಮಾಡಿದೆ. ಹೀಗಾಗಿ ಮರು ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಗೃಹ ಸಚಿವ(Homeminister) ಅರಗ ಜ್ಞಾನೇಂದ್ರ(Araga Jnanendra) ಹೇಳಿದ್ದಾರೆ.

545 ಪಿಎಸ್‍ಐ ಹುದ್ದೆಗಳ ನೇಮಕಾತಿಗಾಗಿ ಈ ಹಿಂದೆ ಪರೀಕ್ಷೆ ನಡೆಸಲಾಗಿತ್ತು. ಈಗಾಗಲೇ ಪರೀಕ್ಷೆಯ ಅಂತಿಮ ಆಯ್ಕೆ ಪಟ್ಟಿಯೂ ಪ್ರಕಟವಾಗಿದೆ. ಇದೆಲ್ಲವನ್ನೂ ರದ್ದು ಮಾಡಿರುವ ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಾರದು ಎಂಬ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದೆ. ಪಿಎಸ್‍ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಸಾಭೀತಾಗಿದೆ. ಸಿಐಡಿ ಅಧಿಕಾರಿಗಳು ಈಗಾಗಲೇ ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ.

ಅಕ್ರಮದ ಮುಖ್ಯ ಸೂತ್ರಧಾರರಾಗಿರುವ ಆರ್.ಡಿ ಪಾಟೀಲ್ ಮತ್ತು ದಿವ್ಯಾ ಹಾಗರಗಿಯನ್ನು ಸಿಐಡಿ ಅಧಿಕಾರಿಗಳು ಈಗಾಗಲೇ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅಕ್ರಮ ನಡೆದಿರುವುದು ಸಾಭೀತಾಗಿರುವುದರಿಂದ ಪರೀಕ್ಷೆಯನ್ನು ರದ್ದು ಮಾಡುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ. ಇನ್ನು ಸಿಐಡಿ ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದು, ಇನ್ನು ಕೆಲವು ಆರೋಪಿಗಳಿಗಾಗಿ ಶೋಧಕಾರ್ಯ ನಡೆಯುತ್ತಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಇನ್ನು ಪಿಎಸ್‍ಐ ನೇಮಕಾತಿಯಲ್ಲಿ ಅಕ್ರಮ ನಡೆಸಿರುವ ಆರೋಪದ ಮೇಲೆ ಈಗಾಗಲೇ ಅಫಜಲಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ಸಹೋದರ ಆರ್.ಡಿ ಪಾಟೀಲ್, ಕಲಬುರಗಿ ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ದಿವ್ಯಾ ಹಾಗರಗಿ ಮತ್ತು ಪರೀಕ್ಷೆ ಮೇಲ್ವಿಚಾರಕಿ ಮತ್ತು ಶಿಕ್ಷಕಿ ಅರ್ಚನಾ ಅವರನ್ನು ಸೇರಿದಂತೆ ಇಲ್ಲಿಯವರೆಗೂ ಐದು ಜನರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Exit mobile version