ರಾಜ್‌ಕುಮಾರ್‌ ಸಮಾಧಿ ಪಕ್ಕದಲ್ಲೇ ಪುನೀತ್‌ ಅಂತ್ಯಕ್ರಿಯೆಗೆ ಸಿದ್ದತೆ

ಬೆಂಗಳೂರು ಅ 30 : ಹೃದಯಾಘಾತದಿಂದ ಮೃತಪಟ್ಟ ನಟ ಪುನೀತ್‌ ರಾಜ್‌ಕುಮಾರ್‌ ಅಂತ್ಯಕ್ರಿಯೆಗೆ ಸ್ಥಳ ನಿಗದಿಪಡಿಸಲಾಗಿದ್ದು, ರಾಜ್‌ಕುಮಾರ್‌ ಸಮಾಧಿ ಪಕ್ಕದಲ್ಲೇ ಪುನೀತ್‌ ಸಮಾಧಿ ಕೂಡ ನಿರ್ಮಾಣವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ತಿಳಿಸಿದ್ದಾರೆ.

ಈಗಾಗಲೇ ಕಂಠೀರವ ಸ್ಟುಡಿಯೋದಲ್ಲಿ ತಂದೆ ರಾಜಕುಮಾರ್ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದೇ ಹೇಳಲಾಗಿತ್ತು, ಆದರೆ, ಅಮೆರಿಕದಲ್ಲಿರುವ ಪುನೀತ್ ಪುತ್ರಿ ದೃತಿ ಬೆಂಗಳೂರಿಗೆ ಆಗಮಿಸುವುದು ಸಂಜೆಯಾಗಲಿರುವುದರಿಂದ ರಾತ್ರಿ ವೇಳೆಗೆ ಅಂತ್ಯಕ್ರಿಯೆ ನಡೆಸುವುದು ಬೇಡವೆಂದು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಹೀಗಾಗಿ ನಾಳೆಯೇ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು ಇಡಲಾಗಿದ್ದು ದಕ್ಷಿಣ ಭಾರತದ ಕನ್ನಡ, ತಮಿಳು, ತೆಲುಗು, ಮಲಯಾಳಂ ಚಿತ್ರರಂಗದ ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ. ನಿನ್ನೆ ಸಂಜೆಯಿಂದ ನಿರಂತರವಾಗಿ ಅಂತಿಮ ದರ್ಶನ ನಡೆಯುತ್ತಿದ್ದು, ಲಕ್ಷಾಂತರ ಅಭಿಮಾನಿಗಳು ಬಂದು ತಮ್ಮ ನೆಚ್ಚಿನ ನಟನನ್ನು ಕೊನೆಯ ಬಾರಿಗೆ ನೋಡಿ ಕಣ್ಣುಂಬಿಕೊಳ್ಳುತ್ತಿದ್ದಾರೆ. ಉತ್ತರ ಕರ್ನಾಟಕ ಸೇರಿ ರಾಜ್ಯದಾದ್ಯಂತದಿಂದ ಅಭಿಮಾನಿಗಳು ಬರುತ್ತಿದ್ದು ಕಂಠೀರವ ಕ್ರೀಡಾಂಗಣಜದಲ್ಲಿ ಜನಸಾಗರವೇ ಸೇರಿದೆ.

ಸಿಎಂ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ ಸೇರಿದಂತೆ ರಾಜ್ಯ ಸರಕಾರದ ಸಚಿವರೆಲ್ಲ ಕಂಠೀರವ ಕ್ರೀಡಾಂಗಣದಲ್ಲಿದ್ದಾರೆ. ವಿವಿಧ ರಂಗದ ಗಣ್ಯರು ಭೇಟಿ ನೀಡುತ್ತಿದ್ದಾರೆ. ಇಂದು ಬೆಳಗ್ಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಕೂಡ ಆಗಮಿಸಿದ್ದು, ಅಂತಿಮ ನಮನ ಸಲ್ಲಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿ, ಅಂತಿಮ ದರ್ಶನ ಪಡೆದು ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದರು.

ಅಂತ್ಯಕ್ರಿಯೆಗೂ ಮುನ್ನ ಕಂಠೀರವ ಕ್ರೀಡಾಂಗಣದಿಂದ ಯಶವಂತಪುರದ ಕಂಠೀರವ ಸ್ಟುಡಿಯೋದತ್ತ ಪಾರ್ಥಿವ ಶರೀರದ ಅಂತಿಮ ಯಾತ್ರ ನಡೆಯಲಿದೆ. ಇದಕ್ಕಾಗಿ ಪೊಲೀಸರು ಬಿಗಿ ಭದ್ರತೆಯನ್ನೂ ಏರ್ಪಡಿಸಿದ್ದಾರೆ. ಕಾರ್ಪೊರೇಶನ್ ವೃತ್ತ ಬಸವೇಶ್ವರ ವೃತ್ಯ ವಿಂಡ್ಸರ್‌ ಮ್ಯಾನರ್, ಸ್ಯಾಂಕಿ ಕೆರೆ, ಮಾರಮ್ಮ ದೇವಸ್ಥಾನ ಸರ್ಕಲ್, ಯಶವಂತಪುರ, ಗೊರಗುಂಟೆಪಾಳ್ಯದ ಮೂಲಕ ಮೆರವಣಿಗೆ ಸಾಗಲಿದೆ. ಹೀಗಾಗಿ ನಮ್ಮ ಈ ರೂಟಿನಲ್ಲಿ ಪೂರ್ತಿಯಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಕೆಎಸ್ ಆರ್ ಪಿ ಸೇರಿ 5 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ಬಳಸಿಕೊಳ್ಳಲಾಗಿದೆ. ಎಂದು ಸಿಎಂ ತಿಳಿಸಿದ್ದಾರೆ.

Exit mobile version