ಪಂಜಾಬ್‌: ‘ಭಾರತೀಯ ಆರ್ಥಿಕ ಪಾರ್ಟಿ’ ಎಂಬ ನೂತನ ಪಕ್ಷ ಅಸ್ತಿತ್ವಕ್ಕೆ

ಪಂಜಾಬ್, ಆ. 09: ಪಂಜಾಬ್‌ನ ವರ್ತಕರ ಸಂಘಟನೆಯು ಹೊಸ ರಾಜಕೀಯ ಪಕ್ಷವೊಂದನ್ನು ರಚಿಸಿದ್ದು, ಭಾರತೀಯ ಕಿಸಾನ್‌ ಯೂನಿಯನ್‌ (ಚದೂನಿ) ಮುಖ್ಯಸ್ಥ ಗುರ್ನಾಮ್‌ ಸಿಂಗ್‌ ಚದೂನಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.

ನೂತನ ಪಕ್ಷಕ್ಕೆ ‘ಭಾರತೀಯ ಆರ್ಥಿಕ ಪಾರ್ಟಿ’ ಎಂದು ಹೆಸರಿಡಲಾಗಿದ್ದು, ರೈತರು, ವರ್ತಕರು ಹಾಗೂ ಕಾರ್ಮಿಕರ ಧ್ವನಿಯಾಗಲಿದೆ ಎಂದು ಪಕ್ಷದ ಸಂಸ್ಥಾಪಕರು ಹೇಳಿದ್ದಾರೆ.

ವರ್ತಕರ ವಿವಿಧ ಸಂಘಟನೆಗಳ ಪ್ರತಿನಿಧಿಗಳ ಸಭೆ ಚದೂನಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು. ವರ್ತಕರ ಸಂಘದ ಅಧ್ಯಕ್ಷ ತರುಣ್‌ ಬಾವಾ ಅವರನ್ನು ನೂತನ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಘೋಷಿಸಲಾಯಿತು.

ಚದೂನಿಯವರು ನೂತನ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿಲ್ಲ. ಆದರೆ, ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ ಸಭೆಯಲ್ಲಿ ಅವರು ಉಪಸ್ಥಿತರಿದ್ದರು.

ಮುಂದಿನ ವರ್ಷ ಪಂಜಾಬ್‌ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಇನ್ನೊಂದೆಡೆ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ, ನೂತನ ಪಕ್ಷವೊಂದು ಅಸ್ತಿತ್ವಕ್ಕೆ ಬಂದಿರುವುದಕ್ಕೆ ಮಹತ್ವ ಬಂದಿದೆ.

Exit mobile version