ಕೊರೋನಾ ತಡೆಗಾಗಿ ರಾಜಕೀಯ ರ್ಯಾಲಿಗಳನ್ನು ನಿಷೇಧಿಸಿದ ಪಂಜಾಬ್

ಪಂಜಾಬ್, ಏ. 07: ದೇಶದಾದ್ಯಂತ ಕೊರೋನಾ ಎರಡನೇ ಅಲೆ ವೇಗವಾಗಿ ಹರಡುತ್ತಿದ್ದು, ಪಂಜಾಬ್​ನಲ್ಲೂ ಈ ಸಂಖ್ಯೆ ಮಿತಿ ಮೀರಿದೆ. ಹೀಗಾಗಿ ಕೊರೋನಾ ಸೋಂಕು ಹರಡುವದನ್ನು ತಡೆಯುವ ನಿಟ್ಟಿನಲ್ಲಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಇಂದಿನಿಂದ ಏಪ್ರಿಲ್ 30 ರವರೆಗೆ ರಾಜ್ಯದಲ್ಲಿ ರಾಜಕೀಯ ರ‍್ಯಾಲಿಗಳನ್ನು ನಿಷೇಧಿಸುವಂತೆ ಆದೇಶಿಸಿದ್ದಾರೆ. ಅಲ್ಲದೆ, ಈ ನಿಯಮವನ್ನು ಯಾರೇ ಮುರಿದರೂ ಸಹ ಅವರ ವಿರುದ್ಧ ಡಿಎಂಎ ಮತ್ತು ಸಾಂಕ್ರಾಮಿಕ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ರಾತ್ರಿ 12 ರಿಂದ ಬೆಳಿಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ವಿಸ್ತರಿಸುವುದಾಗಿಯೂ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಘೋಷಿಸಿದ್ದಾರೆ.

ಈವರೆಗೆ ಪಂಜಾಬ್​ನ 12 ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಘೋಷಿಸಲಾಗಿದೆ. ಅಂತ್ಯಕ್ರಿಯೆ, ಶವಸಂಸ್ಕಾರ, ವಿವಾಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯನ್ನು ಒಳಾಂಗಣದಲ್ಲಿ 50 ಜನರಿಗೆ ಮತ್ತು ಹೊರಾಂಗಣದಲ್ಲಿ 100 ಕ್ಕೆ ಇಳಿಸಲಾಗಿದೆ. ಎಲ್ಲಾ ಸರ್ಕಾರಿ ನೌಕರರು ಕಚೇರಿಯಲ್ಲಿದ್ದಾಗ ಮಾಸ್ಕ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

”ಈ ಹಿಂದೆ ವಿಧಿಸಲಾದ ನಿರ್ಬಂಧಗಳಿಂದಾಗಿ ಕಳೆದ ಕೆಲವು ದಿನಗಳಲ್ಲಿ ಸಕಾರಾತ್ಮಕ ಪ್ರಕರಣಗಳ ಸಂಖ್ಯೆ ಸ್ವಲ್ಪಮಟ್ಟಿಗೆ ಸ್ಥಿರವಾಗಿದ್ದರೂ ಸಹ, ನಡೆಯುತ್ತಿರುವ ಉಲ್ಬಣವನ್ನು ಮತ್ತಷ್ಟು ನಿಯಂತ್ರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ರಾಜಕೀಯ ರ‍್ಯಾಲಿಗಳನ್ನು ನಿಷೇಧಿಸುವಂತೆ ಕಾಂಗ್ರೆಸ್ ಪಕ್ಷವು ಏಕಪಕ್ಷೀಯವಾಗಿ ಘೋಷಿಸಿದ್ದರೂ ಸಹ, ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ತಪ್ಪಿಸಬೇಕೆಂದು ಎಲ್ಲಾ ರಾಜಕೀಯ ಪಕ್ಷಗಳಲ್ಲಿ ನಾವು ಮಾಡಿದ ಮನವಿಯನ್ನು ಕಡೆಗಣಿಸಲಾಗಿತ್ತು. ಹೀಗಾಗಿ ರಾಜಕೀಯ ಕೂಟಗಳನ್ನು ನಿಷೇಧಿಸಿ ಆದೇಶಿಸಬೇಕಾಯಿತು” ಎಂದಿದ್ದಾರೆ.

Exit mobile version