ಮೊದಲು ರಾಹುಲ್ ಗಾಂಧಿ ಡಿಎನ್ಎ ಪರೀಕ್ಷೆ ನಡೆಯಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಪಿ.ವಿ.ಅನ್ವರ್

Tiruvanantapuram: ರಾಷ್ಟ್ರಮಟ್ಟದಲ್ಲಿ ಜೊತೆಯಾಗಿದ್ದು ರಾಜ್ಯ ಮಟ್ಟದಲ್ಲಿ ಪ್ರತ್ಯೇಕವಾಗಿ ಸ್ಪರ್ಧೆ ಮಾಡುತ್ತಿರುವ ಎಲ್‌ಡಿಎಫ್‌ ಮೈತ್ರಿಕೂಟ (LDF Alliance) ಮತ್ತು ಕಾಂಗ್ರೆಸ್ ನಡುವಿನ ಮಾತಿನ ಸಮರ ಚುನಾವಣೆಯ ವೇಳೆ ತೀವ್ರಗೊಳ್ಳುತ್ತಿದೆ. ಇಂಡಿಯಾ ಮೈತ್ರಿಕೂಟಕ್ಕೆ ಇರಿಸುಮುರಿಸು ಉಂಟಾಗುವ ಹಾಗೆ ಒಕ್ಕೂಟದ ಸದಸ್ಯರೊಬ್ಬರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ (Rahul Gandhi) ಡಿಎನ್ಎ ಟೆಸ್ಟ್ ಆಗಬೇಕೆಂದು ಒತ್ತಾಯಿಸಿ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.

ಕೇರಳದಲ್ಲಿ (Kerala) ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ನೇತೃತ್ವದ ಎಲ್‌ಡಿಎಫ್‌ ಮೈತ್ರಿಕೂಟವು, ರಾಷ್ಟ್ರೀಯ ಮಟ್ಟದಲ್ಲಿ ಇಂಡಿಯಾ ಒಕ್ಕೂಟದ ಭಾಗವಾಗಿದೆ. ಆದರೆ, ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಕಮ್ಯೂನಿಸ್ಟ್ ಪಾರ್ಟಿ (Communist Party) ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸಲು ತಯಾರಿ ನಡೆಸಿದೆ.

ಹಾಗಾಗಿ ಕೆಲವು ದಿನಗಳಿಂದ ಪಿಣರಾಯಿ ವಿಜಯನ್ ಮತ್ತು ರಾಹುಲ್ ಗಾಂಧಿ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇದೆ. ಪಿಣರಾಯಿ ಬಗ್ಗೆ ರಾಹುಲ್ ನೀಡಿದ್ದ ಹೇಳಿಕೆಯನ್ನು ಖಂಡಿಸಿ ಪಿಣರಾಯಿ ಬೆಂಬಲಿತ ಪಕ್ಷೇತರ ಶಾಸಕ ಪಿ.ವಿ.ಅನ್ವರ್, ರಾಹುಲ್ ಡಿಎನ್ಎ ಟೆಸ್ಟ್ (DNA Test) ನಡೆಸಬೇಕು ಎನ್ನುವ ವಿವಾದಾತ್ಮಕ ಹೇಳಿಕೆಯನ್ನು ನೀಡಿ ಕಾಂಗ್ರೆಸ್ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನೀಲಾಂಬುರ್ ಶಾಸಕ ಅನ್ವರ್, ನಾನು ವಯನಾಡ್ (Wayanad) ಮೂಲದವನು, ಇಲ್ಲಿಯ ಸಂಸದರಾದ ರಾಹುಲ್ ಗಾಂಧಿ ನಮ್ಮ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ನಾನು ಅವರನ್ನು ಗಾಂಧಿ ಎನ್ನುವ ಉಪನಾಮದಿಂದ ಕರೆಯಲು ಸಾಧ್ಯವಿಲ್ಲ. ಗಾಂಧಿ ಉಪನಾಮ ಹೊಂದಿದವರೆಲ್ಲ ಗಾಂಧಿಯಂತೆ ಆಗುವುದಿಲ್ಲ.ಇತ್ತೀಚಿನ ದಿನಗಳಲ್ಲಿ ಅವರು ಎಷ್ಟು ಕೀಳು ಮಟ್ಟದ ವ್ಯಕ್ತಿಯಾಗಿದ್ದಾರೆ ಎಂದರೆ ಗಾಂಧಿ ಎನ್ನುವ ಸರ್‌ನೇಮ್‌ ನಿಂದ ಕರೆಸಿಕೊಳ್ಳಲು ಅವರು ಯೋಗ್ಯರಲ್ಲ.

ಇದು ಕೇವಲ ನಾನು ಹೇಳುತ್ತಿರುವ ಮಾತಲ್ಲ, ವಯನಾಡ್ ಕ್ಷೇತ್ರದ ಮತದಾರರ ಬಾಯಲ್ಲಿ ಬರುತ್ತಿರುವ ಮಾತು. ನನ್ನ ಪ್ರಕಾರ ಅವರ ಡಿಎನ್ಎ ಪರೀಕ್ಷೆ ನಡೆಯಬೇಕು. ಯಾಕೆಂದರೆ, ನೆಹರೂ (Nehru) ಮನೆತನದ ಸದಸ್ಯರಾಗಿ ಬೆಳೆಯಲು ಅವರಿಗೆ ಅರ್ಹತೆ ಇಲ್ಲ ಎನ್ನುವ ವಿವಾದಾತ್ಮಕ ಹೇಳಿಕೆಯನ್ನು ಅನ್ವರ್ (Anwar) ನೀಡಿದ್ದಾರೆ.

Exit mobile version