ಸಹಾಯಕ ಪ್ರಾಧ್ಯಾಪಕರ ಪರೀಕ್ಷೆಯಲ್ಲೂ ಡೀಲ್? ಪ್ರಶ್ನೆಪತ್ರಿಕೆ ಸೋರಿಕೆ!

sowmya

ಕಳೆದ ತಿಂಗಳು ಮಾರ್ಚ್ 14ರಂದು ನಡೆದಿದ್ದ ಸಹಾಯಕ ಪ್ರಾದ್ಯಾಪಕರ ಪರೀಕ್ಷೆಯಲ್ಲೂ ಡೀಲ್ ನಡೆದಿದೆ. ಪರೀಕ್ಷೆಗೂ ಮೊದಲೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಮೈಸೂರು ವಿಶ್ವವಿದ್ಯಾಲಯದಲ್ಲಿ(Mysuru University) ಈ ಹಿಂದೆ ಅತಿಥಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮತ್ತು ಭೋಗೋಳಶಾಸ್ತ್ರದಲ್ಲಿ ಪಿಎಚ್‍ಡಿ ಪದವೀಧರೆಯಾಗಿದ್ದ ಸೌಮ್ಯ(Sowmya) ಎಂಬ ಯುವತಿ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಸಹಾಯಕ ಪ್ರಾದ್ಯಾಪಕ ಪರೀಕ್ಷೆಯಲ್ಲಿ ಮೇಲ್ವಿಚಾರಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಪ್ರಶ್ನೆಪತ್ರಿಕೆಯಲ್ಲಿನ ಅನೇಕ ಪ್ರಶ್ನೆಗಳನ್ನು ತನ್ನ ವಾಟ್ಸ್‍ಪ್ ಮೂಲಕ ಬೇರೆಡೆ ಕಳುಹಿಸಿದ್ದಾಳೆ. ಪ್ರಶ್ನೆಪತ್ರಿಕೆ ನೀಡುವುದಕ್ಕೂ 40 ನಿಮಿಷಗಳ ಮುಂಚೆಯೇ ಈ ರೀತಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎನ್ನಲಾಗಿದೆ.

ಇನ್ನು ಈಗಾಗಲೇ ಸೌಮ್ಯ ಮೇಲೆ ಕೇಳಿಬಂದಿರುವ ಈ ಆರೋಪದ ಕುರಿತು ಕೆಇಎ ವಿಚಾರಣೆ ನಡೆಸಿತ್ತು. ಆದರೆ ವಿಚಾರಣೆ ವೇಳೆ ನಾನು ನನ್ನ ಅಧ್ಯಯನಕ್ಕಾಗಿ ಕೆಲವು ಪ್ರಶ್ನೆಗಳನ್ನು ಬರೆದುಕೊಂಡಿದ್ದೇನೆ. ಅವು ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳಲ್ಲ ಎಂದು ಉತ್ತರಿಸಿದ್ದಾಳೆ. ಆದರೆ ಸೌಮ್ಯ ವಾಟ್ಸ್‍ಪ್ ಮೂಲಕ ಹಂಚಿಕೊಂಡಿರುವ 18 ಪ್ರಶ್ನೆಗಳ ಪೈಕಿ 11 ಪ್ರಶ್ನೆಗಳು ಪ್ರಶ್ನೆಪತ್ರಿಕೆಯಲ್ಲಿ ಬಂದಿವೆ. ಹೀಗಾಗಿ ಇದೀಗ ಈ ಪ್ರಕರಣವನ್ನು ಪೊಲೀಸ್ ಇಲಾಖೆ ಕೈಗೆತ್ತಿಕೊಂಡಿದ್ದು, ಪೊಲೀಸರು ಸೌಮ್ಯ ವಿಚಾರಣೆಗೆ ಮುಂದಾಗಿದ್ದಾರೆ.

ಸೌಮ್ಯ ಮೇಲೆ ಪ್ರಕರಣ ದಾಖಲಾಗಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಹಿಂದೆ ಅನೇಕ ಪ್ರಭಾವಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಇನ್ನು ರಾಜ್ಯದಲ್ಲಿ ಈಗಾಗಲೇ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದ ಕುರಿತು ತನಿಖೆ ನಡೆಯುತ್ತಿರುವಾಗಲೇ, ಮತ್ತೊಂದು ಪರೀಕ್ಷಾ ಅಕ್ರಮ ಆರೋಪ ಕೇಳಿಬಂದಿದೆ. ಸಹಾಯಕ ಪ್ರಾದ್ಯಾಪಕರ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಎಂಬುದು ಮೆಲ್ನೋಟಕ್ಕೆ ಕಂಡುಬಂದಿದೆ. ಸರ್ಕಾರ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕಿದೆ.

Exit mobile version