ರಾಜನ್‌ ,ಸಾರ್ವಕಾಲಿಕ ಹಿಟ್‌ ಗೀತೆಗಳ ಸರದಾರ

ರಾಜನ್‌ ನಾಗೇಂದ್ರ ಹೆಸರು ಕೇಳಿದಾಗಲೇ ಏನೋ ಸುಮಧುರ ಅನುಭವ. ಈ ಜೋಡಿ ನಿರ್ದೇಶಿಸಿದ ಹಾಡುಗಳನ್ನು ಕೇಳಿ ಆನಂದಿಸದವರೇ ಇಲ್ಲ ಅಂತಲೇ ಹೇಳಬಹುದು. ಅರವತ್ತು, ಎಪ್ಪತ್ತರ ದಶಕದಲ್ಲಿ ಈ ಜೋಡಿ ಮಾಡಿದ ಮೋಡಿ ಅದ್ಭುತ. ಅದು ಕನ್ನಡ ಚಿತ್ರರಂಗದ ಸುವರ್ಣಯುಗ ಅಂತಲೇ ಕರೀಬಹುದು. ರಾಜನ್‌ ನಾಗೇಂದ್ರ ಜೋಡಿಯ ಸಂಗೀತ ನಿರ್ದೇಶನ, ಅದಕ್ಕೆ ಪಿ.ಬಿ ಶ್ರೀನಿವಾಸ್‌, ಡಾ.ರಾಜ್‌ ಅವರ ಕಂಠಸಿರಿ, ಒಟ್ಟು ಕಲಾರಸಿಕರಿಗೆ ಹಬ್ಬದೂಟ.

  ರಾಜನ್‌ ನಾಗೇಂದ್ರ ಸಹೋದರ ನಿರ್ದೇಶಕ ಜೋಡಿ ಕನ್ನಡ ಮಾತ್ರವಲ್ಲದೇ, ಕನ್ನ ತಮಿಳು, ತೆಲುಗು ತುಳುಭಾಷೆಗಳ ಒಟ್ಟು 375ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಒದಗಿಸಿದ್ದಾರೆ. ಉಳಿದಂತೆ ಒಟ್ಟಾರೆ ಸುಮಾರು 175 ಚಿತ್ರಗಳು ತಮಿಳು, ತೆಲುಗು, ಸಿಂಹಳಿ ಭಾಷೆಯ ಚಿತ್ರಗಳಿಗೆ ರಾಜನ್-ನಾಗೇಂದ್ರ ಸಂಗೀತ ನೀಡಿದ್ದಾರೆ.

  ರಾಜನ್‌-ನಾಗೇಂದ್ರ ಜೋಡಿಯಂದ್ರೆ ಅದು ಭಲೇ ಜೋಡಿಯೇ ಸರಿ. ಆದ್ರೆ ೨೦೦೦ನೇ ಇಸವಿಯಲ್ಲಿ ನಾಗೇಂದ್ರ ಅವರು ಕೊನೆಯುಸಿರೆಳೆದ್ರು. ಆ ಬಳಿಕ ರಾಜನ್‌ ತುಂಬಾ ನೊಂದಿದ್ರು. ಅವರ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಾ ಹೋಯಿತು. ಗಾನ ಲೋಕದ ನಂಟನ್ನು ಕಳೆದು ಕೊಂಡಿದ್ರು.ಇವತ್ತು ರಾಜನ್‌ ಇಹಲೋಕದ ಯಾತ್ರೆಯನ್ನು ಮುಗಿಸಿದ್ರು. 

ಮೂಲತಃ ಮೈಸೂರಿನವರಾದ ರಾಜನ್, ತಮ್ಮ ಸಹೋದರ ನಾಗೇಂದ್ರಪ್ಪ ಅವರೊಂದಿಗೆ ಸೇರಿಕೊಂಡು ‘ರಾಜನ್‌-ನಾಗೇಂದ್ರ’ ಹೆಸರಿನಲ್ಲಿ ಜಂಟಿಯಾಗಿ ಸಂಗೀತ ನಿರ್ದೇಶನ ಮಾಡುತ್ತಿದ್ದರು. ಇವರ ತಂದೆ ರಾಜಪ್ಪ ಸಂಗೀತ ಬಲ್ಲವರಾಗಿದ್ದು, ಹಾರ್ಮೋನಿಯಂ ವಾದಕರಾಗಿದ್ದರು. ಅಂದಿನ ಕಾಲದ ಕೆಲವು ಮೂಕಿ (ಮಾತಿಲ್ಲದ ಚಿತ್ರ) ಚಿತ್ರಗಳಿಗೆ ಸಂಗೀತ ನೀಡಿದ್ದರು. ಹೀಗೆ ಸಂಗೀತವನ್ನು ಬಲ್ಲ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದರು. ರಾಜನ್  ‘ವಯೊಲಿನ್  ವಾದ್ಯ’ ದಲ್ಲಿಯೂ, ನಾಗೇಂದ್ರ  ‘ಜಲ ತರಂಗ್  ವಾದ್ಯ’ ನುಡಿಸುವುದರಲ್ಲಿ ಪರಿಣಿತಿಯನ್ನು ಪಡೆದರು.

ಬಾಲ್ಯದಿಂದಲೂ ಸಂಗೀತಮಯ ವಾತಾವರಣದಲ್ಲಿ ಬೆಳೆದ ಈ ಜೋಡಿಯು, 1952ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿ, ಸುಮಾರು 5 ದಶಕಗಳ ಕಾಲ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿತ್ತು. ರಾಜನ್-ನಾಗೇಂದ್ರ ಸಂಗೀತ ನಿರ್ದೇಶಕರಾಗುವ ಮೊದಲು, ಆಗಲೇ ಪ್ರಸಿದ್ಧ ಗಾಯಕರಾಗಿದ್ದ ಪಿ.ಕಾಳಿಂಗರಾಯರ ತಂಡದೊಡನೆ ಸೇರಿ, ಆಕಾಶವಾಣಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. 1952ರಲ್ಲಿ ‘ಸೌಭಾಗ್ಯ ಲಕ್ಷ್ಮಿ’ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದರು.

1952ರಿಂದ 1999ರವರೆಗೆ 375ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಇದರಲ್ಲಿ ಕನ್ನಡದ 200ಕ್ಕೂ ಅಧಿಕ ಸಿನಿಮಾಗಳಿವೆ. ಕನ್ನಡದ ಜೊತೆ ತೆಲುಗಿನಲ್ಲಿಯೂ ಈ ಜೋಡಿ ದೊಡ್ಡ ಯಶಸ್ಸು ಕಂಡಿತ್ತು. ತಮಿಳು, ಹಿಂದಿ, ಮಲಯಾಳಂ, ಶ್ರೀಲಂಕಾದ ಸಿಂಹಳ ಭಾಷೆಯ ಸಿನಿಮಾಗಳಿಗೂ ಸಂಗೀತ ಸಂಯೋಜಿಸಿದ್ದಾರೆ.
ರಾಜನ್ ಸಂಗೀತ ನೀಡಿದ ಜನಪ್ರಿಯ ಸಿನಿಮಾಗಳೆಂದರೆ, ‘ಮಂತ್ರಾಲಯ ಮಹಾತ್ಮೆ’, ‘ಗಂಧದ ಗುಡಿ’, ‘ನಾ ನಿನ್ನ ಬಿಡಲಾರೆ’, ‘ಎರಡು ಕನಸು’, ‘ಕಳ್ಳ ಕುಳ್ಳ’, ‘ಬಯಲು ದಾರಿ’, ‘ನಾ ನಿನ್ನ ಮರೆಯಲಾರೆ’, ‘ಹೊಂಬಿಸಿಲು’, ‘ಆಟೋ ರಾಜ’, ‘ಗಾಳಿಮಾತು’, ‘ಚಲಿಸುವ ಮೋಡಗಳು’, ‘ಬೆಟ್ಟದ ಹೂವು’, ‘ಸುಪ್ರಭಾತ’, ‘ಮತ್ತೆ ಹಾಡಿತು ಕೋಗಿಲೆ’, ‘ಕರುಳಿನ ಕುಡಿ’, ‘ಪರಸಂಗದ ಗೆಂಡೆತಿಮ್ಮ’, ‘ಶ್ರೀನಿವಾಸ ಕಲ್ಯಾಣ’ ಮುಂತಾದವು. ಅದರಲ್ಲಿ ಡಾ. ರಾಜ್‌ಕುಮಾರ್ ಮತ್ತು ಡಾ. ವಿಷ್ಣುವರ್ಧನ್‌ ಅವರ ಸಿನಿಮಾಗಳೇ ಜಾಸ್ತಿ ಇವೆ.

‘ಬಾನಲ್ಲೂ ನೀನೇ ಭುವಿಯಲ್ಲೂ ನೀನೇ..’, ‘ಬಂದೆಯಾ ಬಾಳಿನ ಬೆಳಕಾಗಿ..’, ‘ಚೆಲುವೆಯ ಅಂದದ ಮೊಗಕೆ..’, ‘ಎಂದೆಂದೂ ನಿನ್ನನು ಮರೆತು…’, ‘ಹೊಸ ಬಾಳಿಗೆ ನೀ ಜೊತೆಯಾದೆ..’,’ನಲಿವಾ ಗುಲಾಬಿ ಹೂವೇ..’, ‘ನಾವಾಡುವ ನುಡಿಯೇ ಕನ್ನಡ ನುಡಿ….’, ‘ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು..’, ‘ತೇರಾ ಏರಿ ಅಂಬರದಾಗೆ ನೇಸರ ನಗುತಾನೇ…’ ಮುಂತಾದವು ರಾಜನ್-ನಾಗೇಂದ್ರ ಜೋಡಿಯ ಸಾರ್ವಕಾಲಿಕ ಹಿಟ್ ಗೀತೆಗಳಾಗಿವೆ.

ಈ ಸಹೋದರ ನಿರ್ದೇಶಕ ಜೋಡಿಯು ಇಂದು ನಮ್ಮೊಂದಿಗೆ ಇಲ್ಲವಾದರೂ,  ಈ ಜೋಡಿಯ ಮೂಲಕ ಹಿಟ್‌ ಆದ ಅನೇಕ ಹಾಡುಗಳು ಜನರ ಮನಸ್ಸಿನಲ್ಲಿ ಎಂದಿಗೂ ಚಿರಸ್ಥಾಯಿಯಾಗಿವೆ.

ಶರಧಿ ಆರ್‌. ಫಡ್ಕೆ

Exit mobile version