ರಾಜೀವ್ ಚಿತ್ರಕ್ಕೆ ಕಿಚ್ಚನ ಶುಭಾಶಯ

ಕನ್ನಡದ ‘ಬಿಗ್ ಬಾಸ್’ ರಿಯಾಲಿಟಿ ಶೋನಲ್ಲಿ ಎಂಟನೇ ಸೀಸನ್ ಮೂಲಕ ಜನಮಸೂರೆಗಂಡಿದ್ದ ರಾಜೀವ್ ‘ಉಸಿರೇ ಉಸಿರೇ’ ಎನ್ನುವ ಚಿತ್ರದ ನಾಯಕರಾಗುತ್ತಿದ್ದಾರೆ.

ಕಿಚ್ಚ ಸುದೀಪ ‌ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ, “ನಾನು ಈ ಸಮಾರಂಭಕ್ಕೆ ಬರಲು ಮುಖ್ಯ ಕಾರಣ ರಾಜೀವ. ಅವನಲ್ಲಿ ಈಗಲೂ ಏನೋ ಒಂಥರ ಮುಗ್ಧತೆ ಇದೆ. ಯಾವುದನ್ನು ಬೇಗ ನಂಬಿ ಬಿಡುತ್ತಾನೆ. ಸಿ.ಸಿ.ಎಲ್ ದಿನಗಳಿಂದಲೂ ನನಗೆ ಈತ ಪರಿಚಯ. ಅವನು ಕ್ರಿಕೆಟ್ ಸರಿಯಾಗಿ ಅಭ್ಯಾಸ ಮಾಡಿದ್ದರೆ, ಇಷ್ಟೊತ್ತಿಗೆ ರಾಜ್ಯ ಮಟ್ಟದಲ್ಲಿ ಆಡುತ್ತಿದ್ದ. ಈ ಸಿನಿಮಾದಿಂದ ರಾಜೀವ್ ಗೆ ಒಳ್ಳೆದಾಗಲಿ” ಎಂದು ಶುಭ ಕೋರಿದರು. ಈ ಸಂದರ್ಭದಲ್ಲಿ ಸುದೀಪ್, ತಮಗೆ ಉಡುಗೊರೆಯಾಗಿ ನೀಡಿದ ಬೆಳ್ಳಿ ಪೆನ್ನನ್ನು ನಿರ್ದೇಶಕರಿಗೆ ನೀಡಿ, ನಿಮ್ಮ ಮಾತುಗಳು ತುಂಬಾ ಚೆನ್ನಾಗಿತ್ತು, ನಿಮ್ಮ ಮುಂದಿನ ಕೆಲಸಗಳೆಲ್ಲಾ ಸುಲಲಿತವಾಗಿ ನಡೆಯಲಿ ಎಂದು ಹಾರೈಸಿದರು.

ನಾನು ಈ ತನಕ ಕೆಲವು ಚಿತ್ರಗಳಲ್ಲಿ ನಿಟಿಸಿದ್ದರೂ, ಇಂತಹ ವೇದಿಕೆ ಸಿಗಲು 10 ವರ್ಷ ಬೇಕಾಯಿತು. ಈ ಅವಕಾಶ ಮಾಡಿಕೊಟ್ಟ ನಿರ್ಮಾಪಕ, ನಿರ್ದೇಶಕರಿಗೆ ಧನ್ಯವಾದ ಎಂದು ಮಾತು ಆರಂಭಿಸಿದ ರಾಜೀವ್, ಮೋಷನ್ ಪೋಸ್ಟರ್ ಬಿಡುಗಡೆಗೆ ಆಗಮಿಸಿರುವ ಸುದೀಪ್ ಅವರಿಗೆ ವಿಶೇಷ ಧನ್ಯವಾದ ತಿಳಿಸಿದರು. ನಾನು ಸುದೀಪ್ ಸರ್ ಜೊತೆ ಕಾರಿನಲ್ಲಿ ಬರುತ್ತಿದ್ದಾಗ, ಅವರ ನಟನೆಯ ಚಿತ್ರದ “ಉಸಿರೇ ಉಸಿರೇ” ಹಾಡು ಕೇಳಿದ್ದೆ. ನನಗೆ ಈ ಚಿತ್ರದ ಗೊತ್ತಿದ್ದರಿಂದ ನಿರ್ದೇಶಕರಿಗೆ ಫೋನ್ ಮಾಡಿ ನಮ್ಮ ಚಿತ್ರಕ್ಕೆ ಇದೇ ಶೀರ್ಷಿಕೆ ಇಡೋಣ. ಈಗಲೇ ನೊಂದಾಯಿಸಿ ಎಂದು ಹೇಳಿದೆ. ಚಿತ್ರಕ್ಕಾಗಿ ನಾನು ಹೆಚ್ಚು ವರ್ಕ್ ಔಟ್ ಏನು ಮಾಡಿಲ್ಲ. ಸಹಜವಾಗಿರುವ ಪಾತ್ರ. ನಮ್ಮ ನಾಲ್ಕುವರ್ಷಗಳ ಶ್ರಮಕ್ಕೆ ಈಗ ಉತ್ತಮ ಕಾಲ ಕೂಡಿ ಬಂದಿದೆ.‌ ಎಲ್ಲರ ಹಾರೈಕೆಯು ನಮಗಿರಲಿ ಎಂದರು ರಾಜೀವ್.

“ಇದೊಂದು ಪಕ್ಕಾ ಪ್ರೇಮಕಥೆ.‌ ಇಲ್ಲಿಯವರೆಗೂ ಅನೇಕ ಪ್ರೇಮಕಥೆಯುಳ್ಳ ಚಿತ್ರಗಳು ಬಂದಿವೆಯಾದರೂ ಇದು ವಿಭಿನ್ನ.
ಅಮರಪ್ರೇಮಿಗಳು ಎಂದರೆ ಎಲ್ಲರೂ ರೋಮಿಯೋ – ಜೂಲಿಯಟ್, ಸಲೀಂ – ಅನಾರ್ಕಲಿ ಅನ್ನುತ್ತಾರೆ. ಈ ಚಿತ್ರ ನೋಡಿದ ಮೇಲೆ ಪ್ರೇಕ್ಷಕರು ನಮ್ಮ ಕಥಾನಾಯಕ – ನಾಯಕಿಯನ್ನು ಈ ಸಾಲಿಗೆ‌ ಸೇರಿಸಬಹುದು” ಎಂದ ನಿರ್ದೇಶಕ ಸಿ.ಎಂ.ವಿಜಯ್ ಸೆಪ್ಟೆಂಬರ್ ಅಂತ್ಯದಲ್ಲಿ ಚಿತ್ರೀಕರಣ ಆರಂಭಿಸುವುದಾಗಿ ಹೇಳಿದ್ದಾರೆ.

ಎನ್ ಗೊಂಬೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಈ ಚಿತ್ರ‌ ನಿರ್ಮಾಣ ಮಾಡುತ್ತಿರುವ ನಿರ್ಮಾಪಕ ಪ್ರದೀಪ್ ಯಾದವ್ ಮಾತನಾಡಿ, ನಾನು ಅನೇಕ‌ ಕಥೆಗಳನ್ನು ಕೇಳಿದ್ದೀನಿ. ರಾಜೀವ್ ಹಾಗೂ ವಿಜಯ್ ಬಂದು ಹೇಳಿದ ಈ ಕಥೆ ನನ್ನ ಹೃದಯಕ್ಕೆ ಹತ್ತಿರವಾಯಿತು. ಹಾಗಾಗಿ ಚಿತ್ರ‌ ನಿರ್ಮಾಣಕ್ಕೆ ಮುಂದಾದೆ ಎಂದರು.

ರಾಜೀವ್ ಗೆ ನಾಯಕಿಯಾಗಿ ಶ್ರೀಜಿತ ಘೋಷ್ ನಟಿಸುತ್ತಿದ್ದು, ಅವರು ಸಹ ತಮ್ಮ ಪಾತ್ರದ ಬಗ್ಗೆ ಮೆಚ್ಚುಗೆ ಮಾತನಾಡಿದರು.‌ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಶ್ರೀಜಿತ ಅವರಿಗೆ ಕನ್ನಡದಲ್ಲಿ ಇದು ಚೊಚ್ಚಲ ಚಿತ್ರ. ಸಮಾರಂಭದಲ್ಲಿ ಪಾಲ್ಗೊಂಡ ಖ್ಯಾತ ನಟ ಅಲಿ ಅವರು ಸಹ
ಚಿತ್ರದ ಕಥೆ ಇಷ್ಟವಾಯಿತು. ಹಾಗಾಗಿ ನಟಿಸಲು ಒಪ್ಪಕೊಂಡೆ. ಒಳ್ಳೆಯ ತಂಡದೊಂದಿಗೆ ಕೆಲಸ ಮಾಡುತ್ತಿರುವ ಖುಷಿ ಇದೆ ಎಂದರು. 83ನೇ ಇಸವಿಯಲ್ಲಿ ಅಂಬರೀಶ್ ಅವರ ಏಕಲವ್ಯ ಚಿತ್ರದಲ್ಲಿ ನಟಿಸಿದ್ದ ದಿನಗಳನ್ನು ಅಲಿ ನೆನಪಿಸಿಕೊಂಡರು. ಸುಮಧುರ ಹಾಡುಗಳಿರುವ ಈ ಚಿತ್ರಕ್ಕೆ ವಿವೇಕ್ ಚಕ್ರವರ್ತಿ ಸಂಗೀತ ನೀಡುತ್ತಿದ್ದಾರೆ. ಸರವಣನ್ ಛಾಯಾಗ್ರಹಣ ಮಾಡುತ್ತಿದ್ದಾರೆ.

Exit mobile version