ರಾಮಮಂದಿರ ದೇಣಿಗೆ ದುರುಪಯೋಗ: ಭಾರತೀಯ ಸಂಸ್ಕೃತಿಗೆ ಅಪಮಾನ: ಡಿಕೆಶಿ

ಮಂಡ್ಯ,ಜೂ.15: ರಾಮಮಂದಿರ ಭೂಮಿ ಖರೀದಿಯಲ್ಲಿ ದೊಡ್ಡ ಹಗರಣ ನಡೆದಿರುವುದು ಬೆಳಕಿಗೆ ಬಂದಿದ್ದು, ಇದು ಇಡೀ  ದೇಶ ಹಾಗೂ ಜನರ ಭಾವನೆಗೆ ಮಾಡಿರುವ ಅಪಮಾನ. ಈ ಹಗರಣದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಮಂಡ್ಯದಲ್ಲಿ ಮಂಗಳವಾರ ನಡೆದ 100 ನಾಟ್ ಔಟ್ ಆಂದೋಲನದ ಅಂತಿಮ ದಿನದ ಪ್ರತಿಭಟನೆ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ರಾಮ ಮಂದಿರ ನಿರ್ಮಾಣಕ್ಕೆ ಜನಸಾಮಾನ್ಯರು ತಮ್ಮ ಉಳಿತಾಯದ ಹಣವನ್ನು ದೇಣಿಗೆಯಾಗಿ ನೀಡಿದ್ದರು. ಇಟ್ಟಿಗೆಗಳನ್ನು ಕೊಟ್ಟಿದ್ದಾರೆ. ಆದರೆ ರಾಮಮಂದಿರ ನಿರ್ಮಾಣದಲ್ಲೇ ಅಕ್ರಮ ಎಸಗಿರುವುದು ದೇಶಕ್ಕೇ ದೊಡ್ಡ ಅಪಮಾನ. ಭಾರತೀಯ ಸಂಸ್ಕೃತಿಗೆ, ನಮ್ಮ ಭಾವನೆಗೆ, ಧರ್ಮಕ್ಕೆ ಮಾಡಿದ ಅಪಚಾರ ಎಂದರು.

ರಾಮ ಮಂದಿರ ನಿರ್ಮಾಣಕ್ಕಾಗಿ ಹಳ್ಳಿ, ಹಳ್ಳಿಗಳಲ್ಲಿ ಜನ ದೇಣಿಗೆ ಸಂಗ್ರಹಿಸಿ ಕೊಟ್ಟಿದ್ದಾರೆ. ಹೀಗಿರುವಾಗ ಇವರು ಭೂಮಿ ಖರೀದಿಯಲ್ಲಿ ಅವ್ಯವಹಾರ ಮಾಡಿ ದ್ರೋಹ ಬಗೆದಿದ್ದಾರೆ.

ಇದನ್ನು ಇಡೀ ದೇಶ ಖಂಡಿಸಬೇಕು. ಜನ ಕೊಟ್ಟಿರುವ ದೇಣಿಗೆಯನ್ನು ಹಿಂದಿರುಗಿಸಬೇಕು. ಈ ಹಗರಣದಲ್ಲಿ ಭಾಗಿಯಾದವರನ್ನು ಬಂಧಿಸಿ, ಶಿಕ್ಷೆ ನೀಡಬೇಕು ಎಂದು ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದರು.

Exit mobile version