ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ತಿಪ್ಪೇ ಸಾರಿಸಲು ಎಸ್ಐಟಿಗೆ ವಹಿಸಲಾಗಿದೆ: ಎಚ್‌ಡಿಕೆ ಟೀಕೆ

ಮೈಸೂರು, ಮಾ. 11: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಎಸ್ಐಟಿಗೆ ನೀಡಿರುವುದು ತಿಪ್ಪೆ ಸಾರಿಸುವ ಕೆಲಸವಾಗಿದ್ದು, ಇದರಿಂದ ಯಾವ ತನಿಖೆಯೂ ಆಗಲ್ಲ, ಯಾರಿಗೂ ಶಿಕ್ಷೆಯೂ ಆಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಕರಣದ ಕುರಿತು ಎಸ್ಐಟಿ ತನಿಖೆ ಮಾಡುತ್ತೇವೆ ಅಂತಾರೆ. ಆದರೆ ಯಾರ ವಿರುದ್ಧ ತನಿಖೆ ಮಾಡ್ತಾರೆ? ಏನಂತ ತನಿಖೆ ಮಾಡ್ತಾರೆ? ಯಾವ ವಿಚಾರಗಳ ಆಧಾರದ ಮೇಲೆ ತನಿಖೆಗೆ ಆದೇಶ ಮಾಡ್ತಾರೆ? ಎಫ್ಎಸ್ಎಲ್ ರಿಪೋರ್ಟ್ನಲ್ಲಿ ನಕಲಿ ಅಂತ ಬರಬಹುದು. ಈ ಹಿಂದೆಯೂ ಇಂತಹ ಅದೆಷ್ಟೋ ತನಿಖಾ ವರದಿಗಳು ಮೂಲೆಗುಂಪಾಗಿವೆ. ಈ ಹಿಂದೆ ಮೇಟಿ ಪ್ರಕರಣದಲ್ಲೂ ಕ್ಲೀನ್ ಚಿಟ್ ಆಯ್ತು. ಇಂತಹ ಪ್ರಕರಣಗಳನ್ನು ನೈತಿಕವಾಗಿ ಎದುರಿಸಬೇಕು ಎಂದರು.

ಇದೇ ವೇಳೆ ಆರು ಮಂದಿ ಸಚಿವರು ತಮ್ಮ ವಿರುದ್ಧ ಸುದ್ದಿ ಮಾಡದಂತೆ ಕೋರ್ಟ್ ಮೆಟ್ಟಿಲೇರಿರುವ ಬಗ್ಗೆ ಮಾತನಾಡಿದ ಅವರು, ಆರು ಮಂದಿ ಸಚಿವ ಮಹಾನುಭಾವರು ಕೋರ್ಟ್ಗೆ ಸಲ್ಲಿಸಿರುವ ಅರ್ಜಿ ನೋಡಿ ನಮಗೆ ಆಶ್ಚರ್ಯವಾಯ್ತು. ಸಚಿವರಾದವರು ನಮ್ಮ ತೇಜೋವದೆ ಮಾಡುವಂತಹ ಅಪಪ್ರಚಾರಗಳಿಗೆ ಅವಕಾಶ ಕೊಡಬೇಡಿ ಅಂತ ಕೇಳಿಕೊಳ್ಳಬಹುದಿತ್ತು. ಆದರೆ ನಮಗೆ ಸಂಬಂಧಪಟ್ಟ ಸಿಡಿ ವಿಚಾರ ಪ್ರಸಾರ ಮಾಡಬಾರದು ಅಂತ ಕೋರಿದ್ದಾರೆ. ಈ ವಿಚಾರವನ್ನು ವಕೀಲರಿಂದ ಕೇಳಿ ಆಶ್ವರ್ಯವಾಯ್ತು ಎಂದು ವ್ಯಂಗ್ಯವಾಡಿದ ಅವರು, ಆರು ಮಹಾನುಭಾವರು ತಮಗೆ ರಕ್ಷಣೆ ನೀಡುವಂತೆ ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ. ಸಚಿವರಾಗಿದ್ದುಕೊಂಡು ತಮಗೆ ತಾವೇ ರಕ್ಷಣೆ ಮಾಡಿಕೊಳ್ಳಲಾರದವರು ರಾಜ್ಯದ ಜನರನ್ನು ಹೇಗೆ ರಕ್ಷಣೆ ಮಾಡ್ತಾರೆ ? ಅಂತ ಕುಮಾರಸ್ವಾಮಿ ಪ್ರಶ್ನಿಸಿದರು.

ಇದೇ ವೇಳೆ ರಾಜ್ಯ ಬಜೆಟ್​ ಬಗ್ಗೆ ಮಾತನಾಡಿದ ಅವರು, ಬಿಎಸ್ವೈ ಮಂಡಿಸಿರೋ ಬಜೆಟ್ ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತ. ಪುಸ್ತಕದಲ್ಲಿ ಬರೆದಿರುವುದು ಯಾರಿಗೂ ಸರಿಯಾದ ಮಾಹಿತಿ ಇಲ್ಲ. ಈ ವರ್ಷವೇ ಒಕ್ಕಲಿಗರ ಅಭಿವೃದ್ಧಿಗೆ ಬಿಡುಗಡೆ ಮಾಡ್ತೀನಿ ಅಂತ ಬಿಎಸ್ವೈ ಹೇಳಿದ್ದಾರಾ? ಅಥವಾ ಇಂತಿಷ್ಟು ಕಾಲ ಮಿತಿಯಲ್ಲಿ ಬಿಡುಗಡೆ ಮಾಡ್ತೀನಿ ಅಂತ ಇದೆಯಾ? ಅಲ್ಲಿ ಎಲ್ಲು ಕೂಡ ಇಂತಿಷ್ಟೇ ಕಾಲ ಮಿತಿಯೆಂದು ಇಲ್ಲ. ಆ ಹಣ ಬಿಡುಗಡೆ ಅದೆಷ್ಟು ವರ್ಷ ಬೇಕಾಗುತ್ತೋ? ಗೊತ್ತಿಲ್ಲಅಂತ ಕಿಡಿಕಾರಿದ ಅವರು, ಈ ಬಜೆಟ್ನಲ್ಲಿ ಒಕ್ಕಲಿಗರಿಗೆ 5 ರೂಪಾಯಿ ಕೂಡ ಸಿಗಲ್ಲ. ಜನರಿಗೂ ಬಜೆಟ್ನಿಂದ ಉಪಯೋಗವಾಗಲ್ಲ ಅಂತ ಆರೋಪಿಸಿದರು.

Exit mobile version