ರಾಸಲೀಲೆ ಪ್ರಕರಣ: ರಮೇಶ್ ಜಾರಕಿಹೊಳಿ ಬಂಧನಕ್ಕೆ ಸಂತ್ರಸ್ತೆ ಪರ ವಕೀಲ ಜಗದೀಶ್ ಆಗ್ರಹ: SIT ಮುಂದೆ ಹಾಜರಾದ ಯುವತಿ ‌ಪೋಷಕರು

ಬೆಂಗಳೂರು, ಮಾ. 27: ಯುವತಿ ನೀಡಿದ ದೂರಿನ ಆಧಾರದ ಮೇಲೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಮೇಲೆ ಎಫ್’ಐಆರ್ ದಾಖಲಾಗಿದ್ದು, ಕೂಡಲೇ ಅವರನ್ನು ಬಂಧಿಸಬೇಕೆಂದು ಸಂತ್ರಸ್ತೆ ಪರ ವಕೀಲ ಜಗದೀಶ್ ಆಗ್ರಹಿಸಿದ್ದಾರೆ.
 
ಫೇಸ್’ಬುಕ್ ಲೈವ್ ಮೂಲಕ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಮಾಧ್ಯಮದ ಮೂಲಕ ಬೆದರಿಕೆ ಒಡ್ಡುತ್ತಾ ಓಡಾಡುತ್ತಿದ್ದಾರೆ. ಗಂಭೀರ ಪ್ರಕರಣವೊಂದರಲ್ಲಿ ಅವರ ವಿರುದ್ಧ ದೂರು ದಾಖಲಾಗಿದೆ. ಹೀಗಿದ್ದರೂ ಅವರು ಸರ್ಕಾರದ ವಿರುದ್ಧ ಬೆದರಿಕೆ ಒಡ್ಡುತ್ತಾ ಓಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಒಂದು ವೇಳೆ ನನ್ನನ್ನು ಬಂಧಿಸಿದರೆ ಸರ್ಕಾರವನ್ನು ಬೀಳಿಸುತ್ತೇನೆ. ಸರ್ಕಾರದ ಮುಂದೆ ರಾಜೀನಾಮೆ ರಾಶಿ ಇರುತ್ತದೆ. ಪೊಲೀಸರಿಗೆ ಮೊದಲು ದೂರು ನೀಡಿದ್ದು ನಾನು. ಹಾಗಾಗಿ ಯುವತಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಿ. ನನ್ನನ್ನು ಬಂಧಿಸಲು ಮನೆ ಹತ್ರ ಬಂದರೆ ಸರಿ ಇರೋದಿಲ್ಲ ಎಂದು ರಮೇಶ್ ಜಾರಕಿಹೊಳಿ ಸರ್ಕಾರಕ್ಕೆ ಬೆದರಿಕೆ ಒಡ್ಡುತ್ತಿದ್ದಾರೆ. ಅವರ ಹೇಳಿಕೆಯಿಂದ  ಮುಕ್ತವಾದ ತನಿಖೆ ನಡೆಯುವ ಯಾವುದೇ ಸಾಧ್ಯತೆ ಇಲ್ಲದೆ ಇರುವ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
 
ಮುಕ್ತವಾದ ತನಿಖೆ ಆಗಬೇಕಾದರೆ ಮೊದಲು ರಮೇಶ್ ಜಾರಕಿಹೊಳಿ ಬಂಧನವಾಗಬೇಕು. ಇಲ್ಲವಾದಲ್ಲಿ ಅವರು ಸಾಕ್ಷಿಗಳಿಗೆ ಬೆದರಿಕೆ ಒಡ್ಡುವ, ಸಾಕ್ಷ್ಯವನ್ನು ನಾಶ ಮಾಡುವ ಸಾಧ್ಯತೆ ಇದೆ. ಅವರ ಮೇಲೆ ಲೈಂಗಿಕ ಕಿರುಕುಳ (376) ದೂರು ದಾಖಲಾಗಿದೆ. ಯಾರಾದರು ಸಾಮಾನ್ಯ ವ್ಯಕ್ತಿಯ ಮೇಲೆ ಈ ಪ್ರಕರಣ ದಾಖಲಾಗಿದ್ದರೆ ಪೊಲೀಸರು ಸುಮ್ಮನೆ ಇರುತ್ತಿದ್ದರಾ? ರಮೇಶ್ ಜಾರಕಿಹೊಳಿ ಅವರನ್ನು ಏತಕ್ಕೆ ಬಂಧಿಸುತ್ತಿಲ್ಲ? ಪೊಲೀಸರು ಅವರನ್ನು ಕೂಡಲೇ ಬಂಧಿಸದೆ ಇದ್ದರೆ ಹೈಕೋರ್ಟ್ ಮೊರೆ ಹೋಗಲಾಗುವುದು ಎಂದು ಎಚ್ಚರಿಸಿದ್ದಾರೆ.

ಈ ನಡುವೆ, ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣದಲ್ಲಿ ಭಾಗಿಯಾಗಿರುವ ಯುವತಿಯ ಪೋಷಕರು ಶನಿವಾರ ಎಸ್ಐಟಿ ಮುಂದೆ ಹಾಜರಾಗಿದ್ದಾರೆ. ನನ್ನ ಪೋಷಕರು ಇರುವ ಕಡೆಗೆ ರಕ್ಷಣೆ ನೀಡಬೇಡಿ. ಅವರನ್ನು ಬೆಂಗಳೂರಿಗೆ ಕರೆಯಿಸಿಕೊಂಡು ರಕ್ಷಣೆ ನೀಡಬೇಕೆಂದು ಯುವತಿ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಳು.

ಇದತ ಬೆನ್ನಲ್ಲೇ ಬೆಂಗಳೂರಿನ ಆಡುಗೋಡಿಯಲ್ಲಿರುವ ಎಸ್ಐಟಿ ತಾಂತ್ರಿಕ ವಿಭಾಗದ ಮುಂದೆ ಯುವತಿ ಪೋಷಕರು ಹಾಜರಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ.

Exit mobile version