‘ರಾತ್ರೋರಾತ್ರಿ’ ತೆರೆಗೆ ಸಿದ್ಧ..!

ಹೌದು, ಈ ಚಿತ್ರದ ಹೆಸರೇ ರಾತ್ರೋರಾತ್ರಿ. ಹೊಸಬರೇ ಸೇರಿಕೊಂಡು ಮಾಡಿರುವ ಈ ಚಿತ್ರದ ಮಾಧ್ಯಮಗೋಷ್ಠಿ ಇತ್ತೀಚೆಗೆ ನೆರವೇರಿತು.

ವಾಲ್ಮೀಕಿ ಬ್ರಹ್ಮಾನಂದ ಗುರೂಜಿಯವರ ಆಶೀರ್ವಚನದೊಂದಿಗೆ ಚಿತ್ರದ ಮಾಧ್ಯಮಗೋಷ್ಠಿ ಆರಂಭವಾಯಿತು.
ಚಿತ್ರದ ನಿರ್ದೇಶಕ ಡೀಲ್ ಮುರಳಿ ಮಾತನಾಡಿ, “ಇದು‌ ನನ್ನ ಮೊದಲನೇ ಸಿನಿಮಾ. ಕಡಿಮೆ ಕಲಾವಿದರನ್ನು ಬಳಸುವ ಕಾನ್ಸೆಪ್ಟ್ ಇರಿಸಿಕೊಂಡು ಚಿತ್ರ ಮಾಡಲಾಗಿದೆ. ಸಂಜೆ ಆರರಿಂದ ಬೆಳಿಗ್ಗೆ ಆರರ ತನಕ ನಡೆಯುವ ಕತೆ” ಎಂದರು.

ನಾಯಕ ಪವನ್ ಕುಮಾರ್ ಚಿತ್ರದಲ್ಲಿ
ಕ್ಯಾಬ್ ಚಾಲಕನಾಗಿ ನಟಿಸಿದ್ದು, “ಈ ಸಿನಿಮಾ ಮಾಡುವ ಯೋಚನೆ ಬಂದೊಡನೆ ಮೊದಲು ಸಂಪರ್ಕಿಸಿದ್ದೇ ಸಂಗೀತ ನಿರ್ದೇಶಕರನ್ನು. ಅವರು ಒಪ್ಪಿದ ಮೇಲೆಯೇ ನಿರ್ದೇಶಕರನ್ನು ಭೇಟಿಯಾದೆವು” ಎಂದರು.
ಚಿತ್ರದಲ್ಲಿ ಕ್ಯಾಬ್ ಚಾಲಕನಾದ ನಾಯಕನ ತಾಯಿ ಅನಾರೋಗ್ಯದಿಂದ ಆಸ್ಪತ್ರೆ ಸೇರುತ್ತಾರೆ.‌ ಆಕೆಯ ಚಿಕಿತ್ಸೆಯ ಹಣ ಹೊಂದಿಸಲು ಕಷ್ಟ ಪಡುವ ನಾಯಕನಿಗೆ ಹೆಣವೊಂದನ್ನು ಸಾಗಿಸಿದರೆ ಕೇಳಿದ ದುಡ್ಡು ಸಿಗುವುದೆಂಬ ಆಫರ್ ಬರುತ್ತದೆ. ಹಣಕ್ಕಾಗಿ ಹೆಣ ಸಾಗಿಸಲು ಮುಂದಾಗುವ ನಾಯಕನನ್ನು ಹೆಣದ ರೂಪದಲ್ಲಿರುವ ಹೆಣ್ಣು ಕಾಡಲು ಶುರು ಮಾಡುತ್ತದೆ. ಒಟ್ಟಿನಲ್ಲಿ ರಾತ್ರಿಯಿಡೀ ನಡೆಯುವ ಹಾರರ್ ಕತೆಯೇ ಇದು.

ಪವನ್ ಅವರ ತಂದೆ ದಾಸ್ ಫೈಟರ್ ಆಗಿ ಸುಮಾರು 500 ಸಿನಿಮಾಗಳಲ್ಲಿ ಕೆಲಸ ಮಾಡಿದ್ದು ‘ಕುರುಕ್ಷೇತ್ರ’ದಲ್ಲಿಯೂ ಕೆಲಸ ಮಾಡಿದ್ದಾಗಿ ತಿಳಿಸಿದರು.

ನಾಯಕಿ ರಚಿಕಾ ತಮಗೆ ಪವನ್ ಸ್ನೇಹಿತ. ನಾನು ಚಿತ್ರದಲ್ಲಿ ಅವರಿಗೆ ಜೋಡಿಯಾಗಿದ್ದೇನೆ. ಒಂದು ರಾತ್ರಿಯ ಪಯಣದಲ್ಲಿ ಏನೆಲ್ಲ ನಡೆಯುತ್ತದೆ ಎನ್ನುವುದೇ ಕತೆ ಎಂದರು. ಚಿತ್ರದಲ್ಲಿ ಒಂದೇ ಒಂದು ಹಾಡು ಇದ್ದು, ಸಂಗೀತ ನೀಡಿರುವ ಶ್ರೀಧರ ನರಸಿಂಹನ್ ಅವರೇ ಗೀತೆ ರಚಿಸಿ ಹಾಡಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಖಳನಟ ರಾಜ್ ಕಾಂತ್, ಛಾಯಾಗ್ರಾಹಕ ಕಿರಣ್ ಗಜ ಮೊದಲಾದವರು ಉಪಸ್ಥಿತರಿದ್ದರು. ಜನವರಿ 14ರಂದು ಚಿತ್ರ ತೆರೆಗೆ ತರಲು ಯೋಜನೆ ಹಾಕಲಾಗಿದೆ.

Exit mobile version