ನಿಂತೇ ಹೋಗಿದ್ದ “ಶಾಂತಿ ಕ್ರಾಂತಿ” ಚಿತ್ರದ ಚಿತ್ರೀಕರಣ, ಮತ್ತೆ ಆರಂಭವಾದ ಕಥೆ ನಿಜಕ್ಕೂ ರೋಮಾಂಚನಕಾರಿ!

Ravichandran

ಕನ್ನಡದ ಖ್ಯಾತ ನಿರೂಪಕಿ(Anchor Anushree) ಅನುಶ್ರೀಯವರ ಯೂಟ್ಯೂಬ್(Youtube) ಚಾನೆಲ್ ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್(Crazystar Ravichandran) ಮತ್ತು ರಕ್ಷಿತ್ ಶೆಟ್ಟಿ(Rakshith Shetty) ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಎಂದಿನಂತೆ ತಮ್ಮ ನೇರನುಡಿಗಳ ಮೂಲಕ ಚಿತ್ರರಂಗದಲ್ಲಿ ತಮಗಾದ ಸಿಹಿ ಕಹಿ ಅನುಭವಗಳನ್ನು ಹಂಚಿಕೊಂಡರು.

ಆಗಿನ ಕಾಲದಲ್ಲಿ “ಶಾಂತಿ ಕ್ರಾಂತಿ”(Shanthi Kranthi) ಸಿನಿಮಾ ಮಾಡುವಾಗ ಎದುರಾದ ತೊಂದರೆಗಳ ಬಗ್ಗೆ ರವಿಚಂದ್ರನ್ ಹೇಳುತ್ತಿದ್ದರೆ, ಎಂತವರಿಗೂ ಒಂದು ಕ್ಷಣ ರೋಮಾಂಚನವಾಗುತ್ತದೆ.
ರವಿಚಂದ್ರನ್ ಅವರ ಹೆಸರು ಕೇಳಿದರೆ ಸಾಕು ಇಂದಿಗೂ ನೆನಪಿಗೆ ಬರುವುದು ಅವರೊಬ್ಬ ಕನಸುಗಾರ ಎನ್ನುವುದು. ಈ ಕನಸುಗಾರನ ಒಂದೊಂದು ಕನಸುಗಳು ಸಹ ಅಪೂರ್ವವಾದದ್ದು.

ಯಾವುದೇ ಕಾರ್ಯವನ್ನು ಮಾಡಿದರು ಅದು ಸಂಪೂರ್ಣವಾಗಿ ಮುಗಿಯುವ ತನಕ ಸುಮ್ಮನೆ ಇರುವುದಿಲ್ಲ. ಸಿನಿಮಾರಂಗದಲ್ಲಿ ಈಗ ಮಾಡುತ್ತಿರುವ ಪ್ರಯೋಗಗಳನ್ನು ರವಿಚಂದ್ರನ್ ಅವರು ಹಲವು ವರ್ಷಗಳ ಹಿಂದೆಯೇ ಯಾವುದೇ ತಂತ್ರಜ್ಞಾನವಿಲ್ಲದೆ ಮಾಡಲು ಪ್ರಯತ್ನಿಸಿದ್ದರು. ನಾಯಕಿಯನ್ನು ವಿಭಿನ್ನ ರೀತಿಯಲ್ಲಿ ಹೇಗೆ ತೋರಿಸಬಹುದು, ಎಲ್ಲಾ ನಟರನ್ನು ಹಾಗೂ ದೃಶ್ಯಗಳನ್ನು ಅದ್ದೂರಿಯಾಗಿ ತೆರೆಮೇಲೆ ತೋರಿಸುವ ಸಾಹಸ ಮಾಡುತ್ತಿದ್ದರು ರವಿಚಂದ್ರನ್. ಇದಕ್ಕೆ ಸಾಕ್ಷಿ ಅವರ ಶಾಂತಿ ಕ್ರಾಂತಿ ಸಿನಿಮಾ.

ಶಾಂತಿ-ಕ್ರಾಂತಿ ಸಿನಿಮಾ ಒಂದು ಅದ್ಭುತವಾದ ವಿಭಿನ್ನ ರೀತಿಯ ಸಿನಿಮಾ ಆದರೆ ಅಂದುಕೊಂಡಷ್ಟು ಯಶಸ್ಸನ್ನು ಆ ಸಿನಿಮಾ ತಂದುಕೊಡಲಿಲ್ಲ. ಏಕೆಂದರೆ ಆಗಿನ ಕಾಲದಲ್ಲಿಯೇ ಹಲವಾರು ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಕೋಟಿ ಕೋಟಿ ಹಣವನ್ನು ಸುರಿದಿದ್ದರು ರವಿಚಂದ್ರನ್. ಹೀಗಿರುವಾಗ ಒಂದು ಸಂದರ್ಭದಲ್ಲಿ ಅವರಲ್ಲಿ ಇದ್ದ ಹಣವು ಖಾಲಿಯಾಗಿ ಸಿನಿಮಾ ನಿಲ್ಲುವಂತಹ ಪರಿಸ್ಥಿತಿ ಬರುತ್ತದೆ. ಈ ಸಿನಿಮಾದಲ್ಲಿ ಆಗಿನ ಕಾಲದ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನಾಗಾರ್ಜುನ್ ಕೂಡ ಅಭಿನಯಿಸುತ್ತಿದ್ದರು. 
ಅವರ ದಿನಾಂಕಗಳನ್ನು ನಿಭಾಯಿಸುವುದು ಬಹಳ ಕಷ್ಟಕರವಾಗಿತ್ತು. ಆದ್ದರಿಂದ ರವಿಚಂದ್ರನ್ ಅವರ ತಂದೆ ವೀರಸ್ವಾಮಿ ಅವರೇ ಚಿತ್ರವನ್ನು ನಿಲ್ಲಿಸುವಂತೆ ರವಿಚಂದ್ರನ್ ಅವರಿಗೆ ಹೇಳಿದ್ದರಂತೆ.
ಸಿನಿಮಾವನ್ನು ತನ್ನ ಉಸಿರು ಎಂದುಕೊಂಡಿದ್ದ ರವಿಚಂದ್ರನ್ ಅವರಿಗೆ ಅವರ ತಂದೆಯ ಮಾತನ್ನು ಕೇಳಿ ಆಘಾತವಾಗಿತ್ತು. ಅದೇ ಸಮಯದಲ್ಲಿ ರವಿಚಂದ್ರನ್ ಅವರ ತಂದೆಯ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ದಾಖಲಾಗುತ್ತಾರೆ. ಆಗ ರವಿಚಂದ್ರನ್ ಅವರಿಗೆ ಒಂದು ಉಪಾಯ ಹೊಳೆದು, ಶಾಂತಿ ಕ್ರಾಂತಿ ಸಿನಿಮಾವನ್ನು ಮುಗಿಸಬೇಕೆಂದರೆ ಬೇರೊಂದು ಸಿನಿಮಾವನ್ನು ಮಾಡಿ ಅದರಲ್ಲಿ ಬಂದ ಲಾಭವನ್ನು ಶಾಂತಿ ಕ್ರಾಂತಿ ಸಿನಿಮಾಗೆ ಹಾಕಿ ಚಿತ್ರೀಕರಣವನ್ನು ಮುಗಿಸಬೇಕು ಎಂದು ತೀರ್ಮಾನಿಸುತ್ತಾರೆ.

ಅದೇ ರೀತಿ ತಮಿಳಿನ ಚಿನ್ನತಂಬಿ ಸಿನಿಮಾದ ರೈಟ್ಸ್ ಅನ್ನು ಪಡೆದುಕೊಳ್ಳುತ್ತಾರೆ ಮತ್ತು ಕನ್ನಡದಲ್ಲಿ ರಾಮಾಚಾರಿ ಎಂಬ ಶೀರ್ಷಿಕೆಯನ್ನು ಕೂಡ ಇಡುತ್ತಾರೆ. ರಾಮಾಚಾರಿ ಸಿನಿಮಾದ ನಾಯಕಿಯನ್ನು ಆಯ್ಕೆ ಮಾಡುವಾಗ ರವಿಚಂದ್ರನ್ ಅವರಿಗೆ ಮಾಲಾಶ್ರೀ ಅವರು ನೆನಪಿಗೆ ಬಂದು ಮಾಲಾಶ್ರೀ ಅವರಿಗೆ ಕರೆ ಮಾಡಿದಾಗ, ರವಿಚಂದ್ರನ್ ಅವರ ಒಂದೇ ಒಂದು ಮಾತಿಗೆ ಮಾಲಾಶ್ರೀ ಅವರು ರಾಮಾಚಾರಿ ಸಿನಿಮಾದಲ್ಲಿ ನಾಯಕಿ ನಟಿಯಾಗಿ ಅಭಿನಯಿಸಲು ಒಪ್ಪಿಕೊಳ್ಳುತ್ತಾರೆ. ಸ್ವಲ್ಪ ಸಮಯದಲ್ಲಿಯೇ ರಾಮಾಚಾರಿ ಚಿತ್ರದ ಚಿತ್ರೀಕರಣವನ್ನು ಮುಗಿಸಿ ತೆರೆ ಮೇಲೆ ತರುತ್ತಾರೆ ರವಿಚಂದ್ರನ್.

ರಾಮಾಚಾರಿ ಚಿತ್ರವು ರವಿಚಂದ್ರನ್ ಅವರ ಹಿಂದಿನ ಎಲ್ಲಾ ದಾಖಲೆಗಳನ್ನೂ ಮುರಿದು ಯಶಸ್ವಿ ಚಿತ್ರವಾಗಿ ಹೊರಹೊಮ್ಮುತ್ತದೆ. ರಾಮಾಚಾರಿ ಸಿನಿಮಾದಿಂದ ಬಂದ ಲಾಭವನ್ನು ಅರ್ಧಕ್ಕೆ ನಿಂತಿದ್ದ ಶಾಂತಿ ಕ್ರಾಂತಿ ಸಿನಿಮಾಗೆ ಉಪಯೋಗಿಸಿ ಚಿತ್ರೀಕರಣವನ್ನು ಮುಗಿಸುತ್ತಾರೆ. ರವಿಚಂದ್ರನ್ ಅವರ ಕನಸಿನ ಸಿನಿಮಾ ಶಾಂತಿ ಕ್ರಾಂತಿ ಅವರು ಅಂದುಕೊಂಡಂತೆ ಮೂಡಿ ಬರಲಿಲ್ಲ ಎನ್ನುವುದು ಅವರಿಗೆ ಆಗಲೇ ಅರಿವಾಗಿತ್ತಂತೆ.

ಜೊತೆಗೆ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸುವಲ್ಲಿ ಈ ಸಿನಿಮಾ ವಿಫಲವಾಗುತ್ತದೆ ಎನ್ನುವ ನಿರೀಕ್ಷೆಯೂ ರವಿಚಂದ್ರನ್ ಅವರಿಗೆ ಮೊದಲೇ ಇತ್ತಂತೆ.
Exit mobile version