ಚುನಾವಣಾ ರಾಜಕೀಯ ನಿವೃತ್ತಿಗೆ ಡಿ.ವಿ ಸದಾನಂದಗೌಡ ಧಿಡೀರ್ ಘೋಷಣೆ: ರಾಜ್ಯ ರಾಜಕಾರಣದಲ್ಲಿ ಸಂಚಲನ

Mandya: ಚುನಾವಣಾ ರಾಜಕೀಯ ನಿವೃತ್ತಿಯನ್ನು ಬಿಜೆಪಿ ಸಂಸದರಾದ ಮಾಜಿ ಸಿಎಂ ಡಿವಿ ಸದಾನಂದಗೌಡ (D V Sadanandagowda) ಅವರು ದಿಢೀರ್ ಘೋಷಿಸಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಅವರು ಧಿಡೀರ್ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? ಈ ಬಾರಿ ಲೋಕಸಭಾ ಟಿಕೆಟ್​ ಸಿಗಲ್ಲವೆಂದು ನಿವೃತ್ತಿ ಹೇಳಿದ್ದಾರ ಅಥವಾ ಹೈಕಮಾಂಡ್​ ಎಲೆಕ್ಷನ್​ಗೆ (High Command) ಸ್ಪರ್ಧಿಸದಂತೆ ಪರೋಕ್ಷವಾಗಿ ಚುನಾವಣಾ ರಾಜಕೀಯ ನಿವೃತ್ತಿ ಹೇಳುವಂತೆ ಅನುಮತಿ ನೀಡಿದ್ದೀಯಾ? ಹೀಗೆ ಹಲವು ಪ್ರಶ್ನೆಗಳು ಉದ್ಭವಿಸಿದ್ದು, ಈ ಬಗ್ಗೆ ಯಡಿಯೂರಪ್ಪ ಹಾಗೂ ಸದಾನಂದಗೌಡ ಅವರು ಸ್ಪಷ್ಟನೆ ನೀಡಿದ್ದಾರೆ.

ಹಲವು ಪ್ರಶ್ನೆಗಳು ಕಾರ್ಯಕರ್ತರಲ್ಲಿ ಉದ್ಭವಿಸಿದ್ದು, ಇದರ ಮಧ್ಯೆ ಇದಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (B S Yadiyurappa) ಪ್ರತಿಕ್ರಿಯಿಸಿ, ಚುನಾವಣೆಗೆ ನಿಲ್ಲದಂತೆ ನೇರವಾಗಿ ಕೇಂದ್ರ ಸೂಚಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ ಇದಕ್ಕೆ ಸ್ವತಃ ಸದಾನಂದಗೌಡ ಮಾತನಾಡಿ, ಪಕ್ಷ ಏನಾದರೂ ಚಿರತೆ ಹೊಡಿಸುವಂತೆ ಹೇಳಿದರೂ ಸಹ ನಾನು ಅದನ್ನು ಮಾಡುತ್ತೇನೆ. ರಾಜಕೀಯ ನಿವೃತ್ತಿ ಹಿಂದೆ ಯಾರ ಒತ್ತಡ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸದಾನಂದಗೌಡ ಅವರ ಹೇಳಿಕೆ:
ಮೂವತ್ತು ವರ್ಷದಿಂದ ಎಲ್ಲ ಸ್ಥಾನಮಾನ ನೋಡಿದ್ದೇನೆ. ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಕೂಡ ಅಗಿದ್ದೆ. ಕೇಂದ್ರದಲ್ಲಿ ಏಳು ವರ್ಷ ಮೋದಿ (Modi) ಜೊತೆ ಇದ್ದೆ. ಸಿಎಂ ಆಗಿದ್ದೆ, ರಾಜ್ಯಾಧ್ಯಕ್ಷ ಕೂಡ ಆಗಿದ್ದೆ. ಬಿಜೆಪಿ ದೊಡ್ಡ ಮಟ್ಟದ ಸಂಘಟನೆ ಆಗುತ್ತಿದೆ. 40 ವರ್ಷಕ್ಕಿಂತ ಕೆಳಗಿನವರು ದೇಶದಲ್ಲಿ 60 ಪರ್ಸೆಂಟ್ ಇದ್ದಾರೆ. ನಾನು ಸಾಯುವಾಗ ನನ್ನ ಶವಕ್ಕೆ ಬಿಜೆಪಿ ಬಟ್ಟೆ ಹಾಕಬೇಕು ಎನ್ನುವ ರಾಜನೀತಿ ಒಪ್ಪಲ್ಲ. ಮನುಷ್ಯನಿಗೆ ಕೆಲವು ಇತಿಮಿತಿ ಇರಬೇಕು ಎಂದು ಮಂಡ್ಯದಲ್ಲಿ (Mandya) ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಪಕ್ಷದ ಒತ್ತಡದ ಹಿನ್ನೆಲೆಯಲ್ಲಿ ನಾನು ಕಳೆದ ಬಾರಿ ಸ್ವರ್ಧೆ ಮಾಡಿದ್ದೆ. ಈ ಬಾರಿ ಆರು ತಿಂಗಳ ಮುಂಚೆ ತಿಳಿಸಿದರೆ ಹೊಸಬರನ್ನ ಹುಡುಕಲು ಅನುಕೂಲ ಆಗುತ್ತೆ. ಪಕ್ಷ ಎಲ್ಲವೂ ಕೊಟ್ಟಿದೆ. 25 ವರ್ಷದ ನಂತರ ಚುನಾವಣಾ ರಾಜಕೀಯ ದೂರ ಆಗಬೇಕು ಎಂದುಕೊಂಡಿದ್ದೇ. ಆದರೆ ಪಾರ್ಟಿ ಕೆಲಸ ಮಾಡಲು ಅವಕಾಶ ಸಿಗುತ್ತೆ.

ನಾನು ಯಾರ ಹಿಂದೆ ಚೀಲ ಹಿಡಿದುಕೊಂಡು ಹೋಗಿಲ್ಲ. ಯಾರಿಗೂ ಬೆಣ್ಣೆ ಹಾಕಿಕೊಂಡು ಹೋಗಿಲ್ಲ. ಪಕ್ಷ ಏನಾದರೂ ಚಿರತೆ ಹೊಡಿಸುವಂತೆ ಹೇಳಿದರೂ ಸಹ ನಾನು ಅದನ್ನು ಮಾಡುತ್ತೇನೆ. ಗುಂಪುಗಾರಿಕೆ ಮಾಡಿಲ್ಲ. ಬಿಜೆಪಿ (BJP) ಗುಂಪು‌ ಮಾತ್ರ. ರಾಜಕೀಯ ನಿವೃತ್ತಿ ಹಿಂದೆ ಯಾರ ಒತ್ತಡ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿರುವ (Bengaluru) ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸದಾನಂದ ಗೌಡ ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ವಿಚಾರದ ಬಗ್ಗೆ ಸದಾನಂದ ಗೌಡರಿಗೆ ಕೇಂದ್ರ ಸೂಚನೆ ಕೊಟ್ಟಿದೆ. ಹಾಗಾಗಿ ಅವರು ಈ ಬಾರಿ ಚುನಾವಣೆಗೆ ನಿಲ್ಲುವುದಿಲ್ಲ. ಪಕ್ಷದ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ಇರಲು ಪಕ್ಷ ಹೇಳಿದೆ. ನೇರವಾಗಿ ಚುನಾವಣೆಗೆ ನಿಲ್ಲದಂತೆ ಸೂಚಿಸಿದೆ ಎಂದು ಹೇಳಿದರು.

ಈ ಬಾರಿ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಲು ಆಗಲ್ಲ. ಚುನಾವಣೆಗೆ ನಿಲ್ಲಬೇಡಿ ಎಂದು ನೇರವಾಗಿ ಹೈಕಮಾಂಡ್ ಸದಾನಂದಗೌಡರಿಗೆ ಹೇಳಿದೆ ಎನ್ನುವ ಅರ್ಥದಲ್ಲಿ ಬಿಎಸ್​ವೈ ಹೇಳಿದ್ದಾರೆ. ಆದರೆ ನಿವೃತ್ತಿಯಿಂದ ಯಾರ ಒತ್ತಡ ಇಲ್ಲ ಎಂದು ಸದಾನಂದಗೌಡ ಹೇಳಿದ್ದಾರೆ. ಒಟ್ಟಿನಲ್ಲಿ ಸದಾನಂಗೌಡ ಅವರ ಚುನಾವಣಾ ರಾಜಕೀಯ ನಿವೃತ್ತಿ ಬಗ್ಗೆ ಎಲ್ಲೆಡೆ ಭಾರೀ ಚರ್ಚೆಯಾಗುತ್ತಿದೆ.

ಭವ್ಯಶ್ರೀ ಆರ್.ಜೆ

Exit mobile version