ಗಣೇಶೋತ್ಸವ ಆಚರಣೆಗೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿಗಳ ಸುತ್ತೋಲೆ ಬಿಡುಗಡೆ : ಸುತ್ತೋಲೆಯಲ್ಲಿ ಏನಿದೆ?

Ganesh Festival

ಬೆಂಗಳೂರು : ರಾಜ್ಯ ಸರ್ಕಾರ(State Government) ಗಣೇಶೋತ್ಸವ ಆಚರಣೆಗೆ ಮಾರ್ಗಸೂಚಿಗಳ ಸುತ್ತೋಲೆಯನ್ನು ಹೊರಡಿಸಿದೆ. ಶಾಂತಿಯುತವಾಗಿ ಗಣೇಶೋತ್ಸವ ಆಚರಣೆ ಮಾಡುವ ನಿಟ್ಟಿನಲ್ಲಿ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, ಉತ್ಸವಕ್ಕೂ ಮುಂಚಿತವಾಗಿಯೇ ಗ್ರಾಮಮಟ್ಟದಲ್ಲಿ ಮತ್ತು ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಕೋಮುಸೌಹಾರ್ದ ಸಭೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.


ಗಣೇಶೋತ್ಸವಕ್ಕೂ ಮುನ್ನ ನಾಗರಿಕ ಸಮಿತಿ, ಮೊಹಲ್ಲಾ ಸಮಿತಿ, ಕಾವಲು ಸಮಿತಿ ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳ ಸಭೆ ನಡೆಸಲು ಸೂಚನೆ ನೀಡಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರಿಗೂ ಸುತ್ತೋಲೆ ನೀಡಲಾಗಿದೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ : https://vijayatimes.com/siddaramaiah-reply-to-prathap-simha-question/

ಸರ್ಕಾರದ ಸುತ್ತೋಲೆಯಲ್ಲಿರುವ ವಿವರಗಳು ಹೀಗಿವೆ :

ಉತ್ಸವಕ್ಕೆ ಮುಂಚಿತವಾಗಿ ಪೊಲೀಸ್‌ ಅಧಿಕಾರಿಗಳು ಕೋಮುಸೌಹಾರ್ದ ಸಭೆಗಳನ್ನು ಆಯೋಜಿಸಲು ಕ್ರಮ ವಹಿಸುವುದು. ಉತ್ಸವ ಆಯೋಜಕರಿಂದ ಸರ್ಕಾರ ಹಾಗೂ ನ್ಯಾಯಾಲಯದ ಆದೇಶಗಳನ್ನು ಪಾಲಿಸುವ ಬಗ್ಗೆ ಮುಚ್ಚಳಿಕೆ ಪಡೆಯುವುದು. ಪ್ರತಿ ವಾರ್ಡ್ಗಳ ಮಟ್ಟದಲ್ಲಿ ಸಂಬಂಧಿಸಿದ ವಿವಿಧ ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡಂತೆ ಏಕಗವಾಕ್ಷಿ ವ್ಯವಸ್ಥೆಯನ್ನು ಸ್ಥಾಪಿಸುವುದು.

ಗಣೇಶ ಪ್ರತಿಷ್ಠಾಪನೆಗೆ ಅಗತ್ಯವಿರುವ ಸ್ಥಳ, ಪೆಂಡಾಲ್ ವಿದ್ಯುತ್ ಸಂಪರ್ಕ, ಪರವಾನಗಿಗಳನ್ನು ನೀಡಲು ಕಂದಾಯ, ಲೋಕೋಪಯೋಗಿ, ಇಂಧನ ಅಗ್ನಿಶಾಮಕ, ಪೋಲಿಸ್ ಇಲಾಖೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸಂಯೋಜಿತವಾಗಿ ಪರವಾನಗಿ ನೀಡಲು ಸೂಕ್ತ ಕ್ರಮ ವಹಿಸುವುದು.

ಪರಿಸರ ಮಾಲಿನ್ಯ ಉಂಟಾಗದ ರೀತಿ ಕಾರ್ಯಕ್ರಮ ಆಯೋಜಿಸುವಂತೆ ಆಯೋಜಕರಿಗೆ ಸೂಚಿಸುವುದು. ಕಾರ್ಯಕ್ರಮದ ಆಯೋಜಕರು ನಿಗಧಿತ ನಮೂನೆಯಲ್ಲಿ ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಹಾಗೂ ಆಯೋಜಕರು ಸಲ್ಲಿಸುವ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳು ಜಂಟಿ ತಪಾಸಣೆ ಮಾಡಿ 3 ದಿನಗಳ ಒಳಗೆ ಪರವಾನಗಿ ನೀಡಲು ಕ್ರಮ ವಹಿಸುವುದು.

ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವಂತೆ ಆಯೋಜಕರಿಗೆ ಸೂಚಿಸುವುದು. ವಿಶೇಷವಾಗಿ ಹೈ-ಟೆನ್ನನ್ ತಂತಿ ಹಾದು ಹೋಗಿರುವ ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ಗಣೇಶ ಮೂರ್ತಿಯನ್ನು ಸ್ಥಾಪಿಸಲು ಅನುಮತಿ ಕೊಡುವಂತಿಲ್ಲ.

Exit mobile version