22 ದಿನ, 14,000 ಸೈನಿಕರು, 86 ವಿಮಾನ, 444 ಟ್ಯಾಂಕರ್ ನಾಶ!

russia

ಕಳೆದ 22 ದಿನಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್(Russia-Ukraine) ಯುದ್ದದಲ್ಲಿ(War) ಸಾಕಷ್ಟು ಹಾನಿ ಸಂಭವಿಸಿದೆ. ಅದರಲ್ಲೂ ಚಿಕ್ಕ ರಾಷ್ಟ್ರ ಉಕ್ರೇನ್(Ukraine) ಸಾಕಷ್ಟು ನಷ್ಟ ಅನುಭವಿಸಿದೆ. ಉಕ್ರೇನ್ ದೇಶದ ಅನೇಕ ಸುಂದರ ನಗರಗಳನ್ನು ರಷ್ಯಾ ಸೇನೆ ಹಾಳು ಮಾಡಿದೆ. ಇಡೀ ಉಕ್ರೇನ್ ದೇಶದ ಮೂಲಸೌಕರ್ಯ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಆದರು ಉಕ್ರೇನ್ ಮಾತ್ರ ಯುದ್ದದಿಂದ ಹಿಂದೆ ಸರಿದಿಲ್ಲ. ವಿಶ್ವದ ಬಲಿಷ್ಠ ರಾಷ್ಟ್ರ ರಷ್ಯಾಗೆ ಸೆಡ್ಡು ಹೊಡೆದಿದೆ.

ಇನ್ನು ಉಕ್ರೇನ್‍ನ ವಿದೇಶಾಂಗ ಸಚಿವಾಲಯ ಕೆಲವು ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದು, 22 ದಿನಗಳ ಯುದ್ದದಲ್ಲಿ ನಮ್ಮ ಸೇನೆಯು ರಷ್ಯಾದ 14000 ಸೈನಿಕರನ್ನು ಹತ್ಯೆ ಮಾಡಿದೆ. 86 ಯುದ್ದ ವಿಮಾನಗಳು, 108 ಹೆಲಿಕಾಪ್ಟರ್ ಮತ್ತು 444 ಟ್ಯಾಂಕರ್‍ಗಳನ್ನು ನಾವು ನಾಶಪಡಿಸಿದ್ದೇವೆ. ಇನ್ನು ಉಕ್ರೇನ್‍ನ 103 ನಾಗರಿಕರು ರಷ್ಯಾ ದಾಳಿಯಲ್ಲಿ ಸಾವನ್ನಪ್ಪಿದ್ದು, 56ಕ್ಕೂ ಹೆಚ್ಚು ಚಿಕ್ಕ ಮಕ್ಕಳು ಶೆಲ್ ದಾಳಿಗೆ ಬಲಿಯಾಗಿದ್ದಾರೆ ಎಂದು ಹೇಳಿದೆ.

ಮತ್ತೊಂದೆಡೆ ರಷ್ಯಾ ಪಡೆಗಳು ಉಕ್ರೇನ್ ನಗರಗಳ ಮೇಲೆ ಭೀಕರ ದಾಳಿ ಮಾಡಿವೆ. ಕ್ಷಿಪಣಿ ಮತ್ತು ಶೆಲ್ ದಾಳಿಗೆ ಉಕ್ರೇನ್‍ನ ಅನೇಕ ಐತಿಹಾಸಿಕ ಕಟ್ಟಡಗಳು ಕೂಡಾ ನಾಶವಾಗಿವೆ. ಉಕ್ರೇನ್‍ನ ಪ್ರಸಿದ್ದ ಮಾರಿಯುಪೋಲ್‍ನ ರಂಗಮಂದಿರವನ್ನು ರಷ್ಯಾ ಸೇನೆ ನಾಶ ಮಾಡಿದೆ. ಈ ರಂಗಮಂದಿರದಲ್ಲಿ ನಿರಾಶ್ರಿತರು ಆಶ್ರಯ ಪಡೆದಿದ್ದರು. ಈಗ ಅನೇಕರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ. ರಕ್ಷಣಾ ಕಾರ್ಯಕ್ಕೂ ರಷ್ಯಾ ಸೇನೆ ಬಿಡುತ್ತಿಲ್ಲ. ನಿರಂತರವಾಗಿ ಶೆಲ್ ದಾಳಿ ಮಾಡಲಾಗುತ್ತಿದೆ ಎಂದು ಚೆರ್ನಿಹಿಯೆವ್ ಗವರ್ನರ್ ವ್ಯಾಚೆಸ್ಲಾವ್ ಚೌಸ್ ಹೇಳಿದ್ದಾರೆ.

ಇನ್ನು ರಷ್ಯಾ ಮತ್ತು ಉಕ್ರೇನ್ ಮಧ್ಯೆ ನಿರಂತರವಾಗಿ ಮಾತುಕತೆಗಳು ನಡೆಯುತ್ತಿದ್ದರು, ಯಾವುದೇ ನಿರ್ಣಯಕ್ಕೆ ಬರಲು ಸಾಧ್ಯವಾಗಿಲ್ಲ. ರಷ್ಯಾ ಇಟ್ಟಿರುವ ಕೆಲವು ಬೇಡಕೆಗಳನ್ನು ಒಪ್ಪಲು ಉಕ್ರೇನ್ ಹಿಂದೇಟು ಹಾಕುತ್ತಿದೆ. ಈ ಕಾರಣದಿಂದ ಪುಟಿನ್ ಸೇನೆ ಉಕ್ರೇನ್ ಮೇಲೆ ಭೀಕರ ದಾಳಿ ನಡೆಸುತ್ತಿದೆ. ಅಂತರಾಷ್ಟ್ರೀಯ ನ್ಯಾಯಾಲಯ ನೀಡಿರುವ ನಿಬಂಧನೆಗಳನ್ನು ಕೂಡಾ ರಷ್ಯಾ ತಿರಸ್ಕರಿಸಿದೆ.

Exit mobile version