ಬಿಜೆಪಿ ಬಂದ ಮೇಲೆ ಒಂದಲ್ಲ ಒಂದು ಹಗರಣ ನಡೀತಿದೆ : ಸಾ.ರಾ ಮಹೇಶ್!

sara mahesh

ಪಿಎಸ್‍ಐ ಪರೀಕ್ಷೆ(PSI Exam Scam) ಅಕ್ರಮಕ್ಕೆ ಇಂದು ರಾಜ್ಯಾದ್ಯಂತ ವಿರೋಧಗಳು ವ್ಯಾಪಕವಾಗಿ ಕೇಳಿಬರುತ್ತಿವೆ! ಪಿಎಸ್‍ಐ ಪರೀಕ್ಷೆಯಲ್ಲಿ ಬೃಹತ್ ಅಕ್ರಮ ನಡೆದಿದ್ದು, ಅಕ್ರಮದ ಸೂತ್ರಧಾರಿ ಮಾಜಿ ಬಿಜೆಪಿ ಮಹಿಳಾ ಅಧ್ಯಕ್ಷೆಯಾಗಿದ್ದ ದಿವ್ಯಾ ಹಾಗರಗಿಯನ್ನು(Divya Hagaragi) ಇಂದು ಸಿಐಡಿ ಬಂಧಿಸಿದೆ.

ಈ ಮೂಲಕ ಅನ್ಯಾಯವಾಗಿದ್ದ ವಿದ್ಯಾರ್ಥಿಗಳಿಗೆ ಮೊದಲ ಹಂತದ ನ್ಯಾಯವನ್ನು ಒದಗಿಸಿಕೊಟ್ಟಿದೆ. ಆದ್ರೆ, ವಿದ್ಯಾರ್ಥಿಗಳಿಗೆ ಜೀವನವೇ ಬೇಡವನ್ನಿಸುವಷ್ಟು ಅಘಾತ ಎದುರಾಗಿರುವುದು ನಿಜಕ್ಕೂ ನೋವಿನ ಸಂಗತಿಯೇ! ಪಿಎಸ್‍ಐ ಪರೀಕ್ಷೆಯಲ್ಲಿ ಮೋಸ ಹೋದ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ರಾಜ್ಯ ಗೃಹ ಸಚಿವರಾದ ಅರಗ ಜ್ಞಾನೇಂದ್ರ(Araga Jnanendra) ಅವರು, ಕಿಂಗ್‍ಪಿನ್ ದಿವ್ಯಾ ಹಾಗರಗಿಯನ್ನು ಬಂಧಿಸುವಲ್ಲಿ ಸಿಐಡಿ ಯಶಸ್ವಿಯಾಗಿದೆ. ಸಿಐಡಿ ತಂಡ ನಿಜಕ್ಕೂ ಉತ್ತಮ ಕೆಲಸವನ್ನು ಮಾಡಿದೆ.

ವಿದ್ಯಾರ್ಥಿಗಳಿಗೆ ಮೋಸವಾಗಿರುವುದು ನನಗೆ ಬೇಸರ ತಂದಿದೆ. ಹೀಗಾಗಿಯೇ ಈ ಹಿಂದೆ ನಡೆದಿರುವ ಇಡೀ ನೇಮಕಾತಿ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ. ಈ ಮುಖೇನ ವಿದ್ಯಾರ್ಥಿಗಳ ಭವಿಷ್ಯ ಗಮನದಲ್ಲಿಟ್ಟುಕೊಂಡು ಮರು ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು. ಅರಗ ಜ್ಞಾನೇಂದ್ರ ಅವರ ಹೇಳಿಕೆಯ ಬೆನ್ನಲ್ಲೇ ಸಾಕಷ್ಟು ರಾಜಕೀಯ ಪ್ರಹಾರಗಳು ನಡೆದವು. ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಪಿಎಸ್‍ಐ ಪರೀಕ್ಷೆ ಅಕ್ರಮ ಕುರಿತು ಮಾತನಾಡಿ, ದಿವ್ಯಾ ಹಾಗರಗಿಯನ್ನು ಸಿಐಡಿ ಬಂಧಿಸಿದ್ದು ಖುಷಿಯ ಸಂಗತಿ.

ಆರೋಪಿಯನ್ನು ಸೆರೆಹಿಡಿಯುವಲ್ಲಿ ಸಿಐಡಿ ತಂಡ ಯಶಸ್ವಿಯಾಗಿದೆ. ಪಿಎಸ್‍ಐ ಪರೀಕ್ಷೆ ತೆಗೆದುಕೊಂಡಿದ್ದ ಪ್ರತಿಯೊಬ್ಬ ವಿದ್ಯಾರ್ಥಿಗೂ ಮೋಸವಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಮೋಸವಾಗಬಾರದು! ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಯಾವುದೇ ವಿದ್ಯಾರ್ಥಿಗೂ ಅನ್ಯಾಯವಾಗಬಾರದು ಎಂದು ಆಗ್ರಹಿಸಿದರು. ಇತ್ತ ಮೈಸೂರಿನಲ್ಲಿ ವಾಸ್ತವ ಹೂಡಿರುವ ಮಾಜಿ ಸಚಿವ ಸಾ.ರಾ ಮಹೇಶ್ ಕೂಡ ಪಿಎಸ್‍ಐ ಪರೀಕ್ಷೆ ಅಕ್ರಮ ಕುರಿತು ಧ್ವನಿ ಎತ್ತಿದ್ದು, ಪಿಎಸ್‍ಐ ಪರೀಕ್ಷಾ ಹಗರಣ ಒಂದೇ ಅಲ್ಲ, ಇನ್ನು ಹಗರಣಗಳಿವೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಂಥ ಅಕ್ರಮಗಳು ಸಾಲು ಸಾಲಾಗಿ ನಡೆಯುತ್ತಲೇ ಇವೆ ಎಂದು ಆರೋಪಿಸುವ ಮೂಲಕ ಸಾ.ರಾ ಮಹೇಶ್ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

Exit mobile version