ಭಾರತೀಯ ನೌಕಾಪಡೆಗೆ ಜಲಾಂತರ್ಗಾಮಿಗಳನ್ನು ಪತ್ತೆ ಮಾಡುವ ಸೀಹಾಕ್ ಹೆಲಿಕಾಪ್ಟರ್ ಸೇರ್ಪಡೆ

ನವದೆಹಲಿ, ಜು. 17: ಜಲಾಂತರ್ಗಾಮಿಗಳನ್ನು ಪತ್ತೆ ಮಾಡುವ ಮತ್ತು ರಕ್ಷಣಾ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸುವ ಅಮೆರಿಕ ನಿರ್ಮಿತ, ’ಎಂಎಚ್‌–60 ರೋಮಿಯೊ-ಸೀಹಾಕ್’ ಹೆಸರಿನ ಎರಡು ಹೆಲಿಕಾಪ್ಟರ್ ಗಳು ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿವೆ.

ವಿವಿಧೋದ್ದೇಶದ 24 ಹೆಲಿಕಾಪ್ಟರ್‌ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಒಪ್ಪಿತ್ತು. ಅದರಂತೆ ಶುಕ್ರವಾರ ಮೊದಲ ಎರಡು ಹೆಲಿಕಾಪ್ಟರ್‌ಗಳನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರ ಮಾಡಲಾಗಿದೆ.

ಈ ಕುರಿತು ಟ್ವೀಟ್‌ ಮಾಡಿ ಮಾಹಿತಿ ನೀಡಿರುವ ಅಮೆರಿಕ ನೌಕಾ ವಾಯುಪಡೆ, ಉತ್ತರ ಐಲ್ಯಾಂಡ್‌ನ ಅಮೆರಿಕ ನೌಕಾ ವಾಯುನೆಲೆಯಲ್ಲಿ ಇಂದು ನಡೆದ ಸಮಾರಂಭದಲ್ಲಿ ಭಾರತೀಯ ನೌಕಾಪಡೆಯು ಅಮೆರಿಕದಿಂದ ಮೊದಲ ಎರಡು ಎಂಎಚ್-60 ರೋಮಿಯೊ– ಸೀಹಾಕ್‘ಗಳನ್ನು ಪಡೆದುಕೊಂಡಿದೆ ಎಂದು ಹೇಳಿದೆ.

24 ಹೆಲಿಕಾಪ್ಟರ್‌ಗಳ ಖರೀದಿ ಒಪ್ಪಂದದ ಒಟ್ಟು ಮೊತ್ತ ₹17,836 ಕೋಟಿ (2.6 ಶತಕೋಟಿ ಡಾಲರ್‌) ಆಗಿದೆ. ಸೀಹಾಕ್‌ ಹೆಲಿಕಾಪ್ಟರ್‌ಗಳನ್ನು ಅಮೆರಿಕದ ‘ಲಾಕ್‌ಹೀಡ್‌ ಮಾರ್ಟಿನ್‌’ ನಿರ್ಮಿಸಿದೆ. ಪ್ರಸ್ತುತ ಸಂದರ್ಭದಲ್ಲಿ ಚೀನಾದ ಆಕ್ರಮಣಕಾರಿ ಧೋರಣೆಯಿಂದಾಗಿ ಭಾರತಕ್ಕೆ ಇಂತಹ ಹೆಲಿಕಾಪ್ಟರ್‌ಗಳನ್ನು ಖರೀದಿಸುವುದು ಅಗತ್ಯವಾಗಿತ್ತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Exit mobile version