ಮೋದಿ ವಿರುದ್ದ ಮಮತಾ ಬ್ಯಾನರ್ಜಿ ‘ಗೇಮ್ ಚೇಂಜರ್’ ಆಗಲಿದ್ದಾರೆ : ಶತ್ರುಘ್ನ ಸಿನ್ಹಾ!

shatrughna

ಮುಂಬರುವ ಲೋಕಸಭಾ ಚುನಾವಣೆಯಲ್ಲಿ(Loksabha Election) ನರೇಂದ್ರ ಮೋದಿ(Narendra Modi) ವಿರುದ್ದ ಹೃದಯಗಳ ರಾಣಿ ಮಮತಾ ಬ್ಯಾನರ್ಜಿ(Mamata Banerjee) ನಿಜವಾದ ‘ಗೇಮ್ ಚೇಂಜರ್’ ಆಗಲಿದ್ದಾರೆ ಎಂದು ಸಂಸದ ಶತ್ರುಘ್ನ ಸಿನ್ಹಾ(Shatrugna Sinha) ಅಭಿಪ್ರಾಯಪಟ್ಟಿದ್ದಾರೆ.

ಪಶ್ಚಿಮ ಬಂಗಾಳದ ಅಸನ್ಸೋಲ್ ಲೋಕಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಟಿಎಂಸಿ ಪಕ್ಷದಿಂದ ಸ್ಪರ್ಧಿಸಿ ಗೆದ್ದಿರುವ ಶತ್ರುಘ್ನ ಸಿನ್ಹಾ, ನಾನು ನಮ್ಮೆಲ್ಲರ ಹೃದಯಗಳ ರಾಣಿ ಮಮತಾ ಬಾನರ್ಜಿ ಅವರಿಂದ ಪ್ರಭಾವಿತನಾಗಿದ್ದೇನೆ. ಅವರು ಇಂದು ಇಡೀ ಭಾರತವೇ ಗೌರವಿಸಲ್ಪಡುವ ನಾಯಕಿಯಾಗಿದ್ದಾರೆ. 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರ ರಾಜಕೀಯದ ದಿಕ್ಕನ್ನೇ ಬದಲು ಮಾಡುವ ಸಾಮಥ್ರ್ಯ ಹೊಂದಿದ್ದಾರೆ. ಆಟದ ದಿಕ್ಕನ್ನೇ ಬದಲಾಯಿಸುವ ಅವರೊಂದಿಗೆ ನಾವು ನಮ್ಮ ಕೈಲಾದಷ್ಟು ಪ್ರಯತ್ನ ನಡೆಸುತ್ತೇವೆ ಎಂದರು.

ಇನ್ನು ನಟನಾಗಿ ಯಶಸ್ಸು ಕಂಡ ನಂತರ ರಾಜಕೀಯ ಪ್ರವೇಶಿಸಿದ ಅವರು ತಮ್ಮ ರಾಜಕೀಯ ಜೀವನದ ಕುರಿತು ಮಾತನಾಡಿ, ನಾನು ನನ್ನ ಸಾಮಾಜಿಕ ಜವಾಬ್ದಾರಿಯನ್ನು ಪೂರೈಸಲು ರಾಜಕೀಯಕ್ಕೆ ಬಂದಿದ್ದೇನೆ. ರಾಜಕೀಯಕ್ಕೆ ಬರಲು ಜಯಪ್ರಕಾಶ್ ನಾರಾಯಣ್ ಅವರು ನನಗೆ ಪ್ರೇರಣೆ. ಅವರ ವಿಚಾರಧಾರೆಗಳಿಂದ ನಾನು ಸಾಕಷ್ಟು ಪ್ರಭಾವಿತನಾಗಿದ್ದರಿಂದ ನಾನು ರಾಜಕೀಯಕ್ಕೆ ಬಂದೆ. ಇನ್ನು ನಾನು ಬಿಜೆಪಿ ಪಕ್ಷದಲ್ಲಿನ ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತು ಅಲ್ಲಿಂದ ಹೊರಬಂದೆ. ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ ಅಡ್ವಾಣಿ ಅವರಿದ್ದಾಗ, ಬಿಜೆಪಿಯಲ್ಲಿ ಮುಕ್ತ ಸ್ವಾತಂತ್ರ್ಯವಿತ್ತು. ಇದೀಗ ಬಿಜೆಪಿಯಲ್ಲಿ ಸರ್ವಾಧಿಕಾರಿ ಮನಸ್ಥಿತಿ ಹೆಚ್ಚಾಗಿದೆ.

ಮೋದಿ ಮುನ್ನಡೆಸುತ್ತಿರುವ ಇಂದಿನ ಬಿಜೆಪಿ ನಿರಂಕುಶ ಪ್ರಭುತ್ವವಾಗಿದೆ ಎಂದು ಮೋದಿ ವಿರುದ್ದ ಕಿಡಿಕಾರಿದರು. ಇನ್ನು ಪಶ್ಚಿಮಬಂಗಾಳದ ಅಸನ್ಸೋಲ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಟಿಎಂಸಿ ಗೆಲುವು ದಾಖಲಿಸಿದೆ. ಬಿಜೆಪಿ ಅಭ್ಯರ್ಥಿ ಅಗ್ನಿಮಿತ್ರ ಪಾಲ್ ಅವರ ವಿರುದ್ದ ಟಿಎಂಸಿ ಅಭ್ಯರ್ಥಿ ಶತ್ರುಘ್ನ ಸಿನ್ಹಾ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ.

Exit mobile version