ಶಿವಮೊಗ್ಗ ‌ಘಟನೆ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರಿಗೆ ಎಚ್ಚರಿಕೆ ಗಂಟೆ: ಸುಮಲತಾ ಅಂಬರೀಶ್

ಮಂಡ್ಯ, ಜ. 22: ರಾಜ್ಯವನ್ನೇ ಬೆಚ್ಚಿ ಬೀಳುವಂತೆ ಮಾಡಿದ ಶಿವಮೊಗ್ಗ ಗಣಿಗಾರಿಕೆ ಸ್ಪೋಟದ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಸಂಸದೆ ಸುಮಲತಾ ಅಂಬರೀಶ್, ಶಿವಮೊಗ್ಗದಲ್ಲಿ ನಡೆದ ಘಟನೆ ತಿಳಿದು ತೀವ್ರ ನೋವಾಯಿತು. ನಮ್ಮೆಲರಿಗೂ ಇದೊಂದು ಎಚ್ಚರಿಕೆಯ ಗಂಟೆ. ಅಕ್ರಮ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸುವ ಸಮಯ ಬಂದಿದೆ ಎಂದಿದ್ದಾರೆ.

ಶಿವಮೊಗ್ಗ ಘಟನೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆಯೂ ಎಚ್ಚರಿಸಿರುವ ಅವರು, ಶಿವಮೊಗ್ಗದಲ್ಲಿ ಸ್ಪೋಟದಿಂದ ಸಂಭವಿಸಿರುವ ಸಾವುಗಳು ಮಮಸ್ಸಿಗೆ ದುಃಖ ಹಾಗೂ ಸಂಕಟ ತಂದಿದೆ. ಮೃತರಾದ ಅಮಾಯಕರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಈ ದುರದೃಷ್ಟಕರ ಘಟನೆಯ ಹಿಂದೆ ಇರುವುದು ಗಣಿಗಾರಿಕೆಯಲ್ಲಿ ತೊಡಗಿರುವವರ ಬೇಜವಾಬ್ದಾರಿ ವರ್ತನೆ. ಕಾನೂನಿನಲ್ಲಿ ಏನೇ ಕ್ರಮ ಕೈಗೊಂಡರು ‌ಆ ಅಮಾಯಕ ಜೀವಗಳು ಹಿಂತಿರುಗುವುದಿಲ್ಲ.

ಮಂಡ್ಯ ಜಿಲ್ಲೆಯಲ್ಲಿ ತಲೆಯೆತ್ತಿ ನಿಂತಿರುವ ಕಾನೂನುಬಾಹಿರ ಗಣಿಗಾರಿಕೆ ವಿರುದ್ಧ ನಾನು ಸತತ ಧ್ವನಿ ಎತ್ತುತ್ತಿರುವುದು ಇದೇ ಕಾಳಜಿಯಿಂದ. ಈ ಘಟನೆ ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಲಿ.

ಅಕ್ರಮ ಗಣಿಗಾರಿಕೆಯ ಹಿಂದೆ ಬಹಳ‌ ಸಲ ಸ್ಥಳೀಯ ರಾಜಕಾರಣಿಗಳು ಹಾಗೂ ಕೆಲ ಭ್ರಷ್ಟ ಅಧಿಕಾರಿಗಳ ಸಹಕಾರವಿರುತ್ತದೆ. ಸರ್ಕಾರ ಈ ಕೂಡಲೇ ಎಲ್ಲಾ ಜಿಲ್ಲಾಡಳಿತ ಅಧಿಕಾರಿಗಳಿಗೆ ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸೂಚಿಸಬೇಕೆಂದು ಒತ್ತಾಯಿಸಿದ್ದಾರೆ.

Exit mobile version