ಸಾಲಮನ್ನಾದ ಆಸೆಗಾಗಿ ಬರಗಾಲ ಬರಲೆಂದು ರೈತರು ಕಾಯುತ್ತಾರೆ: ಸಚಿವ ಶಿವಾನಂದ ಪಾಟೀಲ್ ವಿವಾದಾತ್ಮಕ ಹೇಳಿಕೆ

Belagavi: ಸಾಲಮನ್ನಾ ಆಗುತ್ತೇ ಅನ್ನೋ ಆಸೆಯಿಂದ ಪದೇ ಪದೇ ಬರಗಾಲ (Drought) ಬೀಳಲಿ ಎಂದು ರೈತರು ಕಾಯುತ್ತಾರೆ ಎಂದು ಸಚಿವ ಶಿವಾನಂದ ಪಾಟೀಲ್ (Shivananda Patil) ಅವರು ನೀಡಿರುವ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಕೆಲ ದಿನಗಳ ಹಿಂದಷ್ಟೇ ರೈತರಿಗೆ ಪರಿಹಾರ ನೀಡಿದ ಬಳಿಕ ರೈತರ ಆತ್ಮಹತ್ಯೆ (Suicide) ಸಂಖ್ಯೆಗಳು ಹೆಚ್ಚಾಗುತ್ತಿವೆ ಎಂದು ವ್ಯಂಗ್ಯವಾಡಿದ್ದ ಸಚಿವ ಶಿವಾನಂದ್ ಪಾಟೀಲ್ ಇದೀಗ ಮತ್ತೊಮ್ಮೆ ರೈತರ ಬಗ್ಗೆ ಲಘುವಾಗಿ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ.

ಬೆಳಗಾವಿ (Belagavi) ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಸ್ವ ಸಹಾಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತಾನಾಡಿರುವ ಸಚಿವ ಶಿವಾನಂದ ಪಾಟೀಲ್ ಅವರು, ಸಾಲ ಮನ್ನಾದ ಆಸೆಗಾಗಿ ಬರಗಾಲ ಬರಲೆಂದು ರೈತರು (Farmers) ಕಾಯುತ್ತಾರೆ. ಈ ಹಿಂದೆ ಅನೇಕ ಮುಖ್ಯಮಂತ್ರಿಗಳು ಬೆಳೆ ಬೆಳೆಯಲು ಬೀಜನೂ ಕೊಟ್ಟರು, ಉತ್ತಮ ಫಸಲು ಬರಲೆಂದು ಗೊಬ್ಬರವನ್ನೂ ಕೊಟ್ಟರೂ, ಇನ್ನು ಈ ಕೃಷ್ಣಾ ನದಿ ನೀರು ಪುಕ್ಕಟೆ ಸಿಗುತ್ತಿದೆ, ಜೊತೆಗೆ ಕರೆಂಟ್ (Current) ಪುಕ್ಕಟೆ ಸಿಗುತ್ತಿದೆ. ಆದರೂ ರೈತರಿಗೆ ಏನಪ್ಪಾ ಅಂದ್ರೆ ಮ್ಯಾಲ ಮ್ಯಾಲ ಬರಗಾಲ ಬೀಳಲಿ ಅಂತ ಆಸೆ ಇರುತ್ತೇ, ಯಾಕಂದ್ರೆ ಬರಗಾಲ ಬಿದ್ದರೆ ಸಾಲ ಮನ್ನಾ ಆಗುತ್ತೆ ಅಂತಾ. ಆದರೆ ರೈತರು ಈ ರೀತಿಯಾಗಿ ಬಯಸಬಾರದು ಎಂದು ಹೇಳಿದ್ದಾರೆ.

ಸಚಿವ ಶಿವಾನಂದ ಪಾಟೀಲ್ ಅವರ ಈ ಹೇಳಿಕೆ ವಿವಾದದ ಸ್ವರೂಪ ಪಡೆದಿದ್ದು, ರಾಜ್ಯದಲ್ಲಿ ಸಿದ್ದರಾಮಯ್ಯ (Siddaramaih) ಅವರ ಸಚಿವ ಸಂಪುಟದಲ್ಲಿ ಅಜ್ಞಾನಿಗಳು ಅವಿವೇಕಿಗಳೇ ತುಂಬಿದ್ದಾರೆ. ರೈತರು ಪರಿಹಾರದ ಹಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ನಾಲಿಗೆ ಹರಿಬಿಟ್ಟಿದ್ದ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಇದೀಗ ರೈತರು ಬರಗಾಲ ಬರಲಿ ಎಂದು ಕಾಯುತ್ತಿರುತ್ತಾರೆ ಎಂದಿದ್ದಾರೆ.

ಬರ ಬರಲಿ ಎಂದು ರೈತರು ಕಾಯ್ದು ಕೂತಿರಲಿಲ್ಲ, ಕಾಂಗ್ರೆಸ್ (Congress) ಪಕ್ಷದ ಕಾಲ್ಗುಣದಿಂದ ಬರಗಾಲ ಬಂದಿದೆ ಎನ್ನುವುದು ಅಷ್ಟೇ ಸತ್ಯ. ರೈತ ವಿರೋಧಿ ಸರ್ಕಾರ ಅನ್ನದಾತನನ್ನು ಅಪಹಾಸ್ಯ, ಅವಮಾನ ಮಾಡುತ್ತಾ ಅವರನ್ನು ಕುಗ್ಗಿಸುವ ಕೆಲಸ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ (BJP) ಕಿಡಿಕಾರಿದೆ.

Exit mobile version