ಹಳೆಯ ಪಠ್ಯವನ್ನು ಬೋಧಿಸಲು ಆದೇಶ ನೀಡುವುದೊಂದೇ ಪರಿಹಾರ : ಸಿದ್ದರಾಮಯ್ಯ

BJP

ಪರಿಷ್ಕೃತ ಪಠ್ಯಪುಸ್ತಕದ ಬಗೆಗಿನ ವಿವಾದವನ್ನು ಬಿಜೆಪಿ ಸರ್ಕಾರ(BJP Government) ಪ್ರತಿಷ್ಠೆಯಾಗಿ ಸ್ವೀಕರಿಸದೆ ನಮ್ಮ ವಿದ್ಯಾರ್ಥಿಗಳ(Students) ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕು. ವಿವಾದವನ್ನು ಬೆಳೆಸದೆ ಹೊಸ ಪಠ್ಯವನ್ನು ವಾಪಸು ಪಡೆದು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಹಳೆಯ ಪಠ್ಯವನ್ನು ಬೋಧಿಸಲು ಆದೇಶ ನೀಡುವುದೊಂದೇ ಪರಿಹಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಸರಣಿ ಟ್ವೀಟ್(Tweet) ಮಾಡಿರುವ ಅವರು, ಪರಿಷ್ಕೃತ ಪಠ್ಯದಲ್ಲಿರುವುದು ಬೆರಳೆಣಿಕೆಯ ತಪ್ಪುಗಳಲ್ಲ, ಅದರ ಪುಟ-ಪುಟಗಳಲ್ಲಿಯೂ ತಪ್ಪುಗಳಿರುವುದನ್ನು ನಾಡಿನ ಅನೇಕ ಶಿಕ್ಷಣ ತಜ್ಞರು ವಿವರವಾಗಿ ಪಟ್ಟಿಮಾಡಿ ಬಿಜೆಪಿ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಹೀಗಿದ್ದರೂ ದೋಷಪೂರ್ಣ ಪಠ್ಯವನ್ನು ಸಮರ್ಥಿಸಲು ಹೊರಟಿರುವುದು ಸರ್ಕಾರದ ಉದ್ದಟತನವನ್ನಷ್ಟೇ ತೋರಿಸುತ್ತದೆ.
ರಾಜ್ಯ ಸರ್ಕಾರದ ಆದೇಶ ಇಲ್ಲದೆ ರಚನೆಗೊಂಡ ರೋಹಿತ ಚಕ್ರತೀರ್ಥ(Rohith Chakratheertha) ಎಂಬ ಬುದ್ಧಿಗೇಡಿಯ ಅಧ್ಯಕ್ಷತೆಯ ಸಮಿತಿಯೇ ಅಕ್ರಮವಾಗಿರುವಾಗ,

ಆ ಸಮಿತಿ ಪರಿಷ್ಕರಿಸಿರುವ ಪಠ್ಯ ಹೇಗೆ ಕ್ರಮಬದ್ಧವಾಗಲು ಸಾಧ್ಯ? ಪರಿಷ್ಕೃತ ಪಠ್ಯಕ್ಕೆ ವಿರೋಧ ವ್ಯಕ್ತವಾದ ನಂತರ ರಾಜ್ಯ ಸರ್ಕಾರ ದಿನಕ್ಕೊಂದು ಹೇಳಿಕೆ ನೀಡಿ ತನ್ನ ತಪ್ಪನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಪಠ್ಯ ಪರಿಷ್ಕರಣೆಗೆ ರಚನೆಗೊಂಡ ಸಮಿತಿಯನ್ನೇ ರದ್ದುಗೊಳಿಸಿದ ನಂತರ ಅದರ ಶಿಫಾರಸಿನ ಪಠ್ಯ ಕೂಡಾ ರದ್ದಿಗೆ ಸೇರಬೇಕಲ್ಲವೇ? ಪರಿಷ್ಕೃತ ಪಠ್ಯಗಳಲ್ಲಿನ ಕೆಲವು ತಪ್ಪುಗಳನ್ನು ಸರಿಪಡಿಸಿ ಕಳೆದುಹೋದ ಮಾನ ಕಾಪಾಡುವ ವ್ಯರ್ಥ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಿದೆ.

ಹಾಕಿರುವ ತೇಪೆಗಳಿಗಿಂತ ಉಳಿದಿರುವ ತೂತುಗಳೇ ಹೆಚ್ಚಾಗಿವೆ. ಹೊಸ ಪಠ್ಯವನ್ನು ರದ್ದುಪಡಿಸಿ ಹಳೆಯ ಪಠ್ಯವನ್ನೇ ಮುಂದುವರಿಸುವುದೊಂದೇ ಈಗಿನ ಪರಿಹಾರ ಎಂದಿದ್ದಾರೆ.

Exit mobile version