ಮತಾಂತರ ಕಾಯ್ದೆ ಅಲ್ಪಸಂಖ್ಯಾತರನ್ನು ಬೆದರಿಸುವ ಉದ್ದೇಶ ಹೊಂದಿದೆ : ಸಿದ್ದರಾಮಯ್ಯ!

Congress

ರಾಜ್ಯ(State) ಬಿಜೆಪಿ ಸರ್ಕಾರ(BJP Government) ಸುಗ್ರಿವಾಜ್ಞೆಯ ಮೂಲಕ ಜಾರಿಗೆ ತರಲು ಹೊರಟಿರುವ “ಕರ್ನಾಟಕ ಧಾರ್ಮಿಕ ಸಂರಕ್ಷಣಾ ಕಾಯ್ದೆಯೂ” ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ಬೆದರಿಸುವ ಮತ್ತು ಅವರಿಗೆ ಕಿರುಕುಳ ನೀಡುವ ದುರುದ್ದೇಶವನ್ನು ಹೊಂದಿದೆ ಎಂದು ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯ(Siddaramaiah) ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ(Bengaluru) ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರ ತನ್ನ ದುರಾಡಳಿತದಿಂದ ನಿತ್ಯ ಬೆತ್ತಲೆಯಾಗುತ್ತಿದೆ. ಹೀಗಾಗಿ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು, ಜನರ ಗಮನವನ್ನು ಬೇರೆಡೆ ಸೆಳೆಯಲು ಧಾರ್ಮಿಕ ಭಾವನೆಗಳನ್ನು ಕೆರೆಳಿಸುವಂತ ವಿಷಯಗಳನ್ನು ಮುನ್ನಲೆಗೆ ತರುತ್ತಿದೆ. ಹೀಗಾಗಿಯೇ ಈಗ ಅಪ್ರಸ್ತುತವಾಗಿರುವ “ಕರ್ನಾಟಕ ಧಾರ್ಮಿಕ ಸಂರಕ್ಷಣಾ ಕಾಯ್ದೆ”ಯನ್ನು ಜಾರಿಗೆ ತರಲು ಮುಂದಾಗಿದೆ. ಈ ಕಾನೂನನ್ನು ನಮ್ಮ ಪಕ್ಷ ವಿರೋಧಿಸುತ್ತದೆ ಎಂದು ತಿಳಿಸಿದರು.

ಇನ್ನು ಆಮಿಷ, ಬೆದರಿಕೆ ಮತ್ತು ಒತ್ತಡ ಹೇರಿ ಮತಾಂತರ ಮಾಡುವುದನ್ನು ತಡೆಯಲು ಈಗಾಗಲೇ ಇರುವ ಕಾನೂನು ಸಶಕ್ತವಾಗಿದೆ. ಹೀಗಿದ್ದಾಗ ಮತ್ತೊಂದು ಕಾನೂನಿನ ಅವಶ್ಯಕತೆ ಏನಿದೆ. ರಾಜ್ಯದಲ್ಲಿರುವ ಅಲ್ಪಸಂಖ್ಯಾತ ಸಮುದಾಯವನ್ನು ಬೆದರಿಸುವ ಮತ್ತು ಅವರಿಗೆ ಕಿರುಕುಳ ನೀಡುವ ಉದ್ದೇಶವಲ್ಲದೇ ಈ ಕಾಯ್ದೆಯಿಂದ ಏನೂ ಪ್ರಯೋಜನವಿಲ್ಲ. ಸೌಹಾರ್ದಯುತವಾಗಿ ಬದುಕುವ ಹಿಂದೂ ಧರ್ಮದ ನೈಜ ಅನುಮಾಯಿ ಯಾರೂ ಈ ಕಾಯ್ದೆಯನ್ನು ಬೆಂಬಲಿಸುವುದಿಲ್ಲ.

ಇದು ಸಂಘ ಪರಿವಾರದ ರಾಜಕೀಯ ಅಜೆಂಡಾದ ಒಂದು ಭಾಗವಾಗಿದೆ. ಹೀಗಾಗಿಯೇ ರಾಜ್ಯ ಸರ್ಕಾರ ಸಂಘ ಪರಿವಾರವನ್ನು ಮೆಚ್ಚಿಸಲು ಈ ಕಾಯ್ದೆ ಜಾರಿಗೆ ಹೊರಟಿದೆ. ಇನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಅಲ್ಪಸಂಖ್ಯಾತರ ಧಾರ್ಮಿಕ ಕಟ್ಟಡಗಳ ಮೇಲೆ ದಾಳಿಯಾಗುತ್ತದೆ. ಈ ಹಿಂದೆ ಕರಾವಳಿಯಲ್ಲಿ ಚರ್ಚ್‍ಗಳ ಮೇಲೆ ನಡೆದ ದಾಳಿಯಿಂದ ರಾಜ್ಯದ ಜನತೆ ತಲೆತಗ್ಗಿಸುವಂತಾಯಿತು ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು.

ಸ್ವಇಚ್ಚೆಯಿಂದ ಮತಾಂತರಗೊಳ್ಳುವ ಹಕ್ಕನ್ನು ನಮ್ಮ ಸಂವಿಧಾನವೇ ನೀಡಿದೆ. ಇದರ ಹೊರತಾಗಿ ಬಲವಂತವಾಗಿ ನಡೆಯುವ ಮತಾಂತರವನ್ನು ತಡೆಯಲು ಈಗಾಗಲೇ ಕಾನೂನು ರೂಪಿಸಲಾಗಿದೆ. ಹೀಗಿರುವಾಗ ಹೊಸ ಕಾನೂನಿನ ಮೂಲಕ ಏನು ಮಾಡಲು ಸಾಧ್ಯವಾಗುವುದಿಲ್ಲ. ಬಿಜೆಪಿ ಸರ್ಕಾರ ಮುಂಬರುವ ಚುನಾವಣೆಗಾಗಿ ಧಾರ್ಮಿಕ ಮತ್ತು ಭಾವನಾತ್ಮಕ ವಿಷಯಗಳ ಮೇಲೆ ಮತದಾರರನ್ನು ಸೆಳೆಯಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.

Exit mobile version