ರಾಜಸ್ಥಾನ : ಉದಯಪುರದಲ್ಲಿ(Udaipur) ಧರ್ಮಾಂಧನೊಬ್ಬ ನಡೆಸಿರುವ ಬರ್ಬರ ಹತ್ಯೆ(Murder) ಖಂಡನೀಯ. ಹಿಂಸೆ ಪರಿಹಾರ ಅಲ್ಲ, ಉತ್ತರವೂ ಅಲ್ಲ. ಕುರುಡು ಹಿಂಸೆಗೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ನನ್ನ ಸಂತಾಪಗಳು. ಅಲ್ಲಿನ ರಾಜ್ಯ ಸರ್ಕಾರ ಕಾನೂನು(Law) ಕ್ರಮದ ಮೂಲಕ ಕೊಲೆಗಡುಕನಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಒತ್ತಾಯಿಸಿದ್ದಾರೆ.

ಇದೇ ವೇಳೆ ವಿದ್ಯುತ್ ದರ ಹೆಚ್ಚಳದ ಕುರಿತು ಪ್ರತಿಕ್ರಿಯಿಸಿರುವ ಅವರು, ಒಂದೆಡೆ ನಿರುದ್ಯೋಗದಿಂದಾಗಿ ಪ್ರತಿಯೊಂದು ಕುಟುಂಬದ ಆದಾಯ ಗಣನೀಯವಾಗಿ ಕಡಿಮೆಯಾಗಿದೆ. ಇನ್ನೊಂದೆಡೆ ಅಗತ್ಯವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ದರ ಏರಿಕೆಯ ನಿರ್ಧಾರವನ್ನು ಕೈಬಿಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದೇನೆ ಎಂದಿದ್ದಾರೆ. ಎಸ್ಕಾಂಗಳು ಸಲ್ಲಿಸುವ ಪ್ರಸ್ತಾವಗಳನ್ನು ಕಣ್ಣುಮುಚ್ಚಿ ಒಪ್ಪಿಕೊಳ್ಳಲು ವಿದ್ಯುತ್ ನಿಯಂತ್ರಣ ಆಯೋಗ ರಚನೆಯಾಗಿಲ್ಲ. ಬೆಸ್ಕಾಂಗಳು ನಷ್ಟದಲ್ಲಿದ್ದರೆ ಅದಕ್ಕೆ ಭ್ರಷ್ಟಾಚಾರವೂ(Corruption) ಕಾರಣ.
ಕೆಇಆರ್ ಸಿ ರಾಜ್ಯದ ಜನತೆಯ ಹಿತವನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನಿಸಬೇಕೇ ಹೊರತು ಎಸ್ಕಾಂಗಳ ಹಿತವನ್ನಲ್ಲ. ಏಪ್ರಿಲ್ ತಿಂಗಳಲ್ಲಿ ವಿದ್ಯುತ್ ದರವನ್ನು ಏರಿಸಿರುವ ರಾಜ್ಯ ಸರ್ಕಾರ ಮೂರು ತಿಂಗಳ ಅವಧಿಯಲ್ಲಿಯೇ ಮತ್ತೊಮ್ಮೆ ದರ ಏರಿಕೆ ಮಾಡಿದೆ. ಈ ದರ ಏರಿಕೆಯ ಸರಣಿ ನಿಲ್ಲುವ ಹಾಗೆ ಕಾಣುತ್ತಿಲ್ಲ, ಶೀಘ್ರದಲ್ಲಿಯೇ ಇನ್ನೊಮ್ಮೆ ದರ ಏರಿಕೆಯ ಆದೇಶ ಹೊರಬಿದ್ದರೂ ಆಶ್ಚರ್ಯವಿಲ್ಲ. ಕಲ್ಲಿದ್ದಲು ದರ ಏರಿಕೆ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳುವ ಕುಂಟು ನೆಪಮಾತ್ರ. ಈ ಏರಿಕೆ ತಾತ್ಕಾಲಿಕ ಸ್ವರೂಪದ್ದೆಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ.

ಹೀಗಿದ್ದರೂ ತಾತ್ಕಾಲಿಕ ಏರು-ಪೇರುಗಳನ್ನೂ ಸ್ವಲ್ಪ ಕಾಲ ತಾಳಿಕೊಳ್ಳುವ ಆರ್ಥಿಕ ಚೈತನ್ಯ ಇಲ್ಲ ಎನ್ನುವುದು ರಾಜ್ಯ ಸರ್ಕಾರದ ದಿವಾಳಿತನಕ್ಕೆ ಸಾಕ್ಷಿ. ಪೆಟ್ರೋಲ್-ಡೀಸೆಲ್ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನತೆಗೆ, ರಾಜ್ಯ ಸರ್ಕಾರ ವಿದ್ಯುತ್ ದರವನ್ನೂ ಹೆಚ್ಚಿಸುವ ಮೂಲಕ ಚೇತರಿಸಿಕೊಳ್ಳಲಾಗದಂತಹ ಹೊಡೆತ ನೀಡಲು ಹೊರಟಿದೆ. ಇದು ಬಿಜೆಪಿ ಸರ್ಕಾರದ ಆಡಳಿತದ ವೈಫಲ್ಯಕ್ಕೆ ರಾಜ್ಯದ ಜನತೆ ತೆರಬೇಕಾಗಿರುವ ಬೆಲೆ ಎಂದು ಟೀಕಿಸಿದ್ದಾರೆ.