ಕೊಡಗು(Kodagu) ಜಿಲ್ಲೆಯಲ್ಲಿ ಸೆಕ್ಷನ್ 144(Section 144) ಅನ್ವಯ ನಿಷೇಧಾಜ್ಞೆ ಹೇರಿರುವುದರಿಂದ ಕಾನೂನಿಗೆ ಮನ್ನಣೆ ನೀಡಿ ಆಗಸ್ಟ್ 26ರ ಪ್ರತಿಭಟನೆಯನ್ನು ಮುಂದೂಡಲು ಕಾಂಗ್ರೆಸ್ ಪಕ್ಷ(Congress Party) ನಿರ್ಧರಿಸಿದೆ.

ಪಕ್ಷದ ನಾಯಕರ ಜೊತೆ ಚರ್ಚಿಸಿ ಪ್ರತಿಭಟನೆಯ ಮುಂದಿನ ದಿನವನ್ನು ನಿರ್ಧಾರ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ತಿಳಿಸಿದ್ದಾರೆ. ಈ ಕುರಿತು ಟ್ವೀಟ್(Tweet) ಮಾಡಿರುವ ಅವರು, ನಮ್ಮ ಪ್ರತಿಭಟನೆಗೆ ಹೆದರಿ ಅದನ್ನು ರದ್ದುಪಡಿಸಬೇಕೆಂಬ ಉದ್ದೇಶದಿಂದಲೇ ಬಿಜೆಪಿ ಸರ್ಕಾರ ಅದೇ ದಿನ ಜನಜಾಗೃತಿ ಸಮಾವೇಶ ನಡೆಸಲು ಹೊರಟಿದೆ.
ಪೊಲೀಸರ ನಿಷ್ಕ್ರಿಯತೆಯನ್ನು ಮುಚ್ಚಿಹಾಕುವ ದುರುದ್ದೇಶದಿಂದಲೇ ಪಕ್ಷದಿಂದ ಸಮಾವೇಶ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದನ್ನು ಜನ ಸುಲಭದಲ್ಲಿ ಅರ್ಥಮಾಡಿಕೊಳ್ಳುತ್ತಾರೆ. ರಾಜ್ಯ ಸರ್ಕಾರದ ನಿಷ್ಕ್ರಿಯತೆ, ಭದ್ರತಾ ವೈಫಲ್ಯ ಮತ್ತು ಅತಿವೃಷ್ಟಿ ಪರಿಹಾರದಲ್ಲಿ ಸ್ಥಳೀಯ ಶಾಸಕರ ಭ್ರಷ್ಟಾಚಾರದ ವಿರುದ್ಧ ನಾವು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೆವು.

ಲಕ್ಷಾಂತರ ಮಂದಿ ಭಾಗವಹಿಸುವ ಈ ಸಮಾವೇಶದಲ್ಲಿ ಸರ್ಕಾರದ ವೈಫಲ್ಯ ಬಯಲಾಗುತ್ತದೆ ಎಂಬ ಭೀತಿಯಲ್ಲಿ ನಿಷೇದಾಜ್ಞೆ ಹೇರಲಾಗಿದೆ ಎಂದು ಆರೋಪಿಸಿದ್ದಾರೆ. ನನ್ನ ಮೇಲೆ ಮೊಟ್ಟೆ ಒಡೆದದ್ದು ತಪ್ಪು ಎಂದು ಮುಖ್ಯಮಂತ್ರಿ ಬಸವವರಾಜ ಬೊಮ್ಮಾಯಿ(Basavaraj Bommai) ಮತ್ತು ಬಿ.ಎಸ್.ಯಡಿಯೂರಪ್ಪ(BS Yedurappa) ಹೇಳಿದ್ದಾರೆ.
ಈಗ ಇವರಿಬ್ಬರು ಅದೇ ಘಟನೆಯ ವಿರುದ್ಧ ನಾವು ಮಾಡುವ ಪ್ರತಿಭಟನೆಯನ್ನೂ ತಪ್ಪು ಎಂದು ಹೇಳುತ್ತಿದ್ದಾರೆ. ಯಾಕಿಂತಹ ದ್ವಂದ್ವ? ಪ್ರತಿಭಟನೆ ವಿರೋಧ ಪಕ್ಷದ ಹಕ್ಕು. ಆಡಳಿತ ಪಕ್ಷ ಪ್ರತಿಭಟನೆಗೆ ಕಾರಣ ತಿಳಿದುಕೊಂಡು ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಆದರೆ ಬಿಜೆಪಿ ಶಾಸಕ ಬೋಪಯ್ಯ ಅವರು ಕೊಡಗಿಗೆ ಬರಲಿ ನೋಡ್ಕೋತಿವಿ ಎಂದು ನನಗೆ ಸವಾಲು ಹಾಕುತ್ತಾರೆ.
ಇದನ್ನೂ ಓದಿ : https://vijayatimes.com/sonia-gandhi-health-checkup/
ಇದೇ ರೀತಿ ಸವಾಲು ಹಾಕಿದ್ದ ಬಳ್ಳಾರಿ ರೆಡ್ಡಿಗಳು ಏನಾದರೂ ಎನ್ನುವುದು ಇವರ ನೆನಪಲ್ಲಿರಲಿ. ಕೊಡಗಿನ ಜನರು ನೇರ ನಡೆ-ನುಡಿಯ ನ್ಯಾಯದ ಪರವಾಗಿರುವ ಜನ. ನಮ್ಮ ಪ್ರತಿಭಟನೆ ಪೊಲೀಸ್ ಇಲಾಖೆ ಮತ್ತು ರಾಜ್ಯ ಸರ್ಕಾರದ ವಿರುದ್ಧವಾಗಿತ್ತೇ ಹೊರತು ಕೊಡಗಿನ ಜನರ ವಿರುದ್ಧವಾಗಿರಲಿಲ್ಲ. ಅಲ್ಲಿನ ಜನ ಬಿಜೆಪಿ ಶಾಸಕರ ವಿರುದ್ಧ ತಿರುಗಿಬಿದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರು ಬಿಜೆಪಿಗೆ ಬುದ್ಧಿ ಕಲಿಸಲಿದ್ದಾರೆ ಎಂದಿದ್ದಾರೆ.