ಕಾಂಗ್ರೆಸ್‌ ಯೋಜನೆಗಳನ್ನು ಬಿಜೆಪಿ ಕಸಿದು ಕೊಂಡಿತು – ಸಿದ್ದರಾಮಯ್ಯ

ವಿಜಯಪುರ ಆ 21 : ಕಾಂಗ್ರೆಸ್‌ ಪಕ್ಷ ರಾಜ್ಯದ ಜನರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಆ ಎಲ್ಲಾ ಯೋಜನೆಗಳನ್ನು ಬಿಜೆಪಿ ಕಸಿದು ಕೊಂಡಿತು. ರಾಜ್ಯದ ಬಡಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಭಾಗ್ಯಗಳನ್ನು ನೀಡಿದ ಸರ್ಕಾರ ನಮ್ಮದಾಗಿತ್ತು. ಆದರೆ, ಆ ಎಲ್ಲಾ ಭಾಗ್ಯಗಳನ್ನು ಕಸಿದುಕೊಳ್ಳುವ ಮೂಲಕ ಬಿಜೆಪಿ ರಾಜ್ಯದ ಜನತೆಗೆ ಅನ್ಯಾಯವನ್ನು ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ತಾಂಬಾ ಗ್ರಾಮದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ ಮನಗೂಳಿ ಪರ ಮತಯಾಚಿಸಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ಕೃಷಿ ಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ, ವಿದ್ಯಾಸಿರಿ ಹೀಗೆ ಮುಂತಾದ ಯೋಜನೆಗಳನ್ನು ನಮ್ಮ ಸರ್ಕಾರದಲ್ಲಿ ಯೋಜಿಸಿದ್ದು ಆದರೆ ನಮ್ಮ ಸರ್ಕಾರದ ಹಲವು ಯೋಜನೆಗಳು ಇಂದು ಸ್ಥಗಿತಗೊಂಡಿವೆ. ಅನ್ನಭಾಗ್ಯದ ಅಕ್ಕಿ ಪ್ರಮಾಣವನ್ನು ಐದು ಕೆ.ಜಿ.ಗೆ ಇಳಿಸಲಾಗಿದೆ. ಕೋವಿಡ್‌ ಅವಧಿಯಲ್ಲಿ ಜನರಿಗೆ ನೆರವು ನೀಡಲು ಇವರ ಬಳಿ ಹಣವಿರಲಿಲ್ಲ. ಆದರೆ, ಹಿಂಬಾಗಿಲಿನಿಂದ ಶಾಸಕರ ಕುದುರೆ ವ್ಯಾಪಾರ ಮಾಡಿ ಸರ್ಕಾರವನ್ನು ರಚನೆ ಮಾಡಲು ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಬಡವರಿಗಾಗಿ ಪ್ರತಿ ಬಾರಿ ಮನೆಗಳ ಮಂಜೂರು ಮಾಡಿದ್ದೆವು. ಈಗ ಬಿಜೆಪಿ ಸರ್ಕಾರ ಒಂದು ಮನೆಯನ್ನೂ ಮಂಜೂರು ಮಾಡುತ್ತಿಲ್ಲ. ಜನರಿಗೆ ಬರೀ ಸುಳ್ಳು ಹೇಳಿ ಕೋಟಿ ಕೋಟಿ ಹಣ ಲೂಟಿ ಹೊಡೆಯುವ ಕೆಲಸ ಮಾಡುತ್ತಿದೆ. ಬಿಜೆಪಿಯವರು ಯಡಿಯೂರಪ್ಪ ಅವರನ್ನು ಮುಂದೆ ಬಿಟ್ಟು ಕೋಟ್ಯಂತರ ರೂಪಾಯಿ ಹಣವನ್ನು ಖರ್ಚು ಮಾಡಿಸಿ, ಸರ್ಕಾರದ ರಚನೆಯನ್ನು ಮಾಡಿಸಿದರು. ಎರಡು ವರ್ಷ ಆಗುತ್ತಿದ್ದಂತೆ ಯಡಿಯೂರಪ್ಪ ಅವರನ್ನೇ ಕಿತ್ತುಬಿಸಾಕಿದರು ಎಂದು ಲೇವಡಿ ಮಾಡಿದರು

Exit mobile version