ವಿಶ್ವೇಶ್ವರಯ್ಯ ಶ್ರಮಿಕ ವರ್ಗದವರ ಮತ್ತು ರೈತರ ಪ್ರತಿನಿಧಿ – ಬಸವರಾಜ ಬೊಮ್ಮಾಯಿ

 ಬೆಂಗಳೂರು ಸೆ 15 : ಭಾರತ ದೇಶದ ಆರ್ಥಿಕತೆಯನ್ನು ಬಲಪಡಿಸುವ ಶ್ರಮಿಕ ವರ್ಗದವರು ಮತ್ತು ರೈತರೆ ನಿಜವಾಗಿ ನಾಡು ಕಟ್ಟುವವರು ಸರ್ ಎಂ ವಿಶ್ವೇಶ್ವರಯ್ಯ ಅವರು ಈ ವರ್ಗದವರನ್ನು ಪ್ರತಿನಿಧಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ಇಂಜಿನಿಯರುಗಳ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಕೆ.ಆರ್.ವೃತ್ತದಲ್ಲಿ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನಗಳನ್ನು ಸಲ್ಲಿಸಿ ಹಾಗೂ ಬಿ.ಬಿ.ಎಂ.ಪಿ ವತಿಯಿಂದ ನಿರ್ಮಿಸಿರುವ 160ಅಡಿ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅತ್ಯಂತ ಕೆಳಸ್ತರದಲ್ಲಿ ದುಡಿಯುವ ವರ್ಗದವರು ನಮ್ಮ ಆರ್ಥಿಕತೆಯನ್ನು ಬೆಳೆಸುವ ಮೂಲ ಪುರುಷರು ಹಾಗೂ ತಾಯಂದಿರು. ವಿಶ್ವೇಶ್ವರಯ್ಯ ಅವರು ಈ ವರ್ಗದವರನ್ನು ಪ್ರತಿನಿಧಿಸುತ್ತಾರೆ. ವಿಶ್ವೇಶ್ವರಯ್ಯ ಅವರ ಸಾಧನೆ ಅಪಾರ. ಕೆ.ಆರ್.ಎಸ್. ಅಣೆಕಟ್ಟಿನಿಂದ ಹಿಡಿದು ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳ ನಿರ್ಮಾಣ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಹಲವಾರು ಕಾರ್ಖಾನೆಗಳು, ಮಹಿಳೆಯರಿಗೆ ಮೀಸಲಾತಿ, ಮುಂತಾದ ಕ್ರಮಗಳ ಮೂಲಕ ಅತ್ಯಂತ ಪ್ರಗತಿಪರ ಚಿಂತನೆಗಳಿಂದ ಅವರು ನಾಡು ಕಟ್ಟಿದ್ದಾರೆ. ಅಂಥ ವ್ಯಕ್ತಿಗೆ ನಮನ ಸಲ್ಲಿಸುವ ದಿನವಿದು. ನಾವೂ ಸಹ ಅವರ ಹಾದಿಯಲ್ಲಿ ನಡೆದು, ಅವರಂತೆ ನಾಡು ಕಟ್ಟಲು ಸಣ್ಣ ಪ್ರಯತ್ನ ಮಾಡಲು ಸಂಕಲ್ಪ ಮಾಡುವ ದಿನವೆಂದು ನಾನು ಭಾವಿಸಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೆ.ಆರ್. ವೃತ್ತದಲ್ಲಿ ವಿಶ್ವೇಶ್ವರಯ್ಯ ಪ್ಲಾಜಾ ಕಟ್ಟಲಾಗಿದೆ. ಇಲ್ಲಿ ಮಿನಿ ಗ್ರಂಥಾಲಯ ಇದೆ. ಸಾರ್ವಜನಿಕರು ಇಲ್ಲಿ ಕುಳಿತುಕೊಂಡು ಓದಬಹುದು. ಇದೇ ರೀತಿ 30 ಜಂಕ್ಷನ್ ಗಳನ್ನು ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಲು ಬಿಬಿಎಂಪಿ ತೀರ್ಮಾನಿಸಿದೆ. ಬೆಂಗಳೂರನ್ನು ಅಂದವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.‌

Exit mobile version