ಮಕ್ಕಳಿಗೆ ಸತ್ಯ ಕಲಿಸಿ, ಐಡಿಯಾಲಜಿ ಅಲ್ಲ : ಎಸ್.ಎಲ್.ಭೈರಪ್ಪ!

SL Byrappa

ರಾಜ್ಯದಲ್ಲಾದ ಪಠ್ಯಪರಿಷ್ಕರಣೆ ಕುರಿತು ಕೆಲವರು ವಿವಾದ ಸೃಷ್ಟಿಸಿದ್ದಾರೆ. ಅನಗತ್ಯ ವಿವಾದಗಳಿಂದ ಸಹಜವಾಗಿಯೇ ಸರ್ಕಾರದ ಮೇಲೆ ಒತ್ತಡ ಹೆಚ್ಚಿದೆ.

ಆದರೆ ಮಕ್ಕಳಿಗೆ ಸತ್ಯ ಕಲಿಸಬೇಕೆ ಹೊರತು, ಐಡಿಯಾಲಜಿ ಅಲ್ಲ ಎಂದು ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ(SL Byrappa) ಅಭಿಪ್ರಾಯಪಟ್ಟರು. ಮೈಸೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಮಕ್ಕಳಿಗೆ ಶಿಕ್ಷಣದಲ್ಲಿ ಸತ್ಯ ಹೇಳಬೇಕು ಎಂದಷ್ಟೇ ನಾನು ಹೇಳುತ್ತೇನೆ. ಆದರೆ ಈಗ ಪರಿಷ್ಕರಣೆ ಮಾಡಿರುವ ಪಠ್ಯವನ್ನು ವಾಪಸ್ ಪಡೆಯಬೇಕೋ..ಬೇಡವೋ ಎಂಬ ವಿಷಯದ ಬಗ್ಗೆ ನಾನು ಯಾವ ಸಲಹೆಯನ್ನು ನೀಡುವುದಿಲ್ಲ ಎಂದರು.

ಇನ್ನು ಶಿಕ್ಷಣ ಸಚಿವ(Education Minister) ಬಿ.ಸಿ.ನಾಗೇಶ್(BC Nagesh) ಅವರ ಮನೆ ಮೇಲೆ ದಾಳಿ ಮಾಡಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು, ಬೆಂಬಲವಿದ್ದವರೆ ಮನೆಗೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಹೀಗಾದರೆ ದೇಶದಲ್ಲಿ ಸಮಾನತೆ, ಏಕತೆ ಬರುವುದು ಯಾವಾಗ..? ನಮ್ಮ ಸ್ವಾತಂತ್ರ್ಯ ಉಳಿಸಿಕೊಳ್ಳುವುದು ಯಾವಾಗ..? ಎಂದು ಪ್ರಶ್ನಿಸಿದರು. ಇನ್ನು ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ‘ಪ್ರಶಸ್ತಿ ವಾಪಸ್’ ಚಳುವಳಿ ಪ್ರಾರಂಭಿಸಿದ್ದರು. ನಂತರ ಅದು ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ.

ಆಗ ಪ್ರಶಸ್ತಿ ವಾಪಸ್ ನೀಡಿದವರು, ಪ್ರಶಸ್ತಿಯೊಂದಿಗೆ ಬಂದಿದ್ದ ಹಣವನ್ನು ವಾಪಸ್ ಮಾಡಬೇಕೆಂದು ಪ್ರತಿಪಾದಿಸಿದ್ದೆ. ಈಗ ಪಠ್ಯ ವಾಪಸ್ ಅದರ ರೂಪವಷ್ಟೇ ಎಂದರು. ಇನ್ನು ನಾನು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಕೆಲಸ ಮಾಡಿದ್ದೇನೆ. ಪಠ್ಯಪರಿಷ್ಕರಣೆಗಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ(Indira Gandhi) ಅವರು ಪಾರ್ಥಸಾರಥಿ ನೇತೃತ್ವದಲ್ಲಿ ರಚಿಸಿದ ಸಮಿತಿಯಲ್ಲಿ ನಾನು ಸದಸ್ಯನಾಗಿದ್ದೆ. ಆಗ ಪಾರ್ಥಸಾರಥಿ ಅವರು “ನಮ್ಮ ಪಠ್ಯ ಕಲುಷಿತವಾಗಿದೆ. ಅದನ್ನು ಸ್ವಚ್ಚಗೊಳಿಸಬೇಕಿದೆ” ಎಂದು ಹೇಳಿದ್ದರು.

ಹಾಗೆಂದರೇನು ಎಂದು ನಾನು ಕೇಳಿದ್ದೆ. “ಔರಂಗಜೇಬ್ ದೇಗುಲ ಕೆಡವಿದ, ಮಸೀದಿ ಕಟ್ಟಿಸಿದ ಎಂದೆಲ್ಲಾ ಪಠ್ಯದಲ್ಲಿದೆ. ಈ ರೀತಿಯ ಸಂಗತಿಗಳನ್ನು ಮಕ್ಕಳ ಮನಸ್ಸಿನಲ್ಲಿ ತುಂಬುವುದು ಬೇಕಾ..?” ಎಂದಿದ್ದರು. ‘ಮಸೀದಿಯ ಮುಂದೆ ಬಸವಣ್ಣನ ಮೂರ್ತಿ ಮಸೀದಿ ನೋಡುತ್ತಾ ಕುಳಿತಿದ್ದರೆ, ಅಲ್ಲಿ ದೇವಾಲಯ ಇತ್ತು ಎಂದೇ ಅರ್ಥ’ ಎಂದು ಹೇಳಿದ್ದೆ. ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅದಾಗಿ 15 ದಿನಗಳಲ್ಲಿ ನನ್ನನ್ನು ಸಮಿತಿಯಿಂದ ಕೈಬಿಟ್ಟಿದ್ದರು ಎಂದು ತಿಳಿಸಿದರು.

Exit mobile version